ನಾನೇ ಅರ್ಹರಿಗೆ ನಿವೇಶನ ಹಂಚಿಕೆ ಮಾಡುತ್ತೇನೆ
ಪಿರಿಯಾಪಟ್ಟಣ : ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನಿವೇಶನ ಹಂಚಿಕೆ ಮಾಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸೇರಿದಂತೆ ಆಯಾ ಆಡಳಿತ ಮಂಡಳಿಗೆ ಸೂಚನೆ ನೀಡುತ್ತೇನೆ, ಇದರಲ್ಲಿ ಯಾರು ಕೂಡ ಮಧ್ಯಸ್ತಿಕೆ ಮಾಡಲು ಬರಬೇಡಿ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಮರದೂರು ಮೂಡಲ ಕೊಪ್ಪಲು, ಬೆಟ್ಟದತುಂಗಾ, ಕುಡಕೂರು ಕೊಪ್ಪಲು, ಆಯಿತನಹಳ್ಳಿ, ಸನ್ಯಾಸಿಪುರ, ರಾಮನಾಥ ತುಂಗಾ, ಕಿರನಲ್ಲಿ ಹಾಗೂ ಚೌಕೂರು ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಅಲ್ಲಿನ ಆಡಳಿತ ಮಂಡಳಿಯವರೊಡಗೂಡಿ ಯಾರು ಅತ್ಯಂತ ಕಡು ಬಡವರು ಹಾಗೂ ವಸತಿರಹಿರು ಇದ್ದಾರೋ ಅಂತವರನ್ನು ಗುರುತಿಸಿ ಅವರ ವಾಸ್ತವ ಸ್ಥಿತಿಗಳನ್ನು ಅರಿತು ನಿವೇಶನ ರಹಿತರನ್ನು ಆಯ್ಕೆ ಮಾಡುತ್ತೇನೆ. ಇದರಲ್ಲಿ ಯಾರು ಕೂಡ ಮಧ್ಯಸ್ತಿಕೆ ಮಾಡಬೇಡಿ. ಇದರಿಂದಾಗಿ ಗೊಂದಲ ಘರ್ಷಣೆಯಾಗುತ್ತದೆ. ಈಗಾಗಲೇ ಕಳೆದ ಸಾಲಿನಲ್ಲಿ ನಿವೇಶನ ರಹಿತರ ಆಯ್ಕೆ ಪಟ್ಟಿಯನ್ನು ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಇದರಲ್ಲಿ ಲೋಪದೋಷಗಳಿದ್ದರೆಸರಿಪಡಿಸಿ ನಿವೇಶನ ಹಂಚಿಕೆಗೆ ಫಾಲಾನುಭವಿಗಳನ್ನು ಆಯ್ಕೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬೆಟ್ಟದತುಂಗಾ ಗ್ರಾಮಸ್ಥರು ಮಾತನಾಡಿ ಗ್ರಾ ಪಂ ಅಧಿಕಾರಿಗಳು ಗ್ರಾಮಸ್ಥರ ಗಮನಕ್ಕೆ ಬರದೇ ನಿವೇಶನ ಹಂಚಲು ಆಯ್ಕೆ ಪಟ್ಟಿ ಮಾಡಿದ್ದಾರೆ. ಇದರಿಂದಾಗಿ ಅರ್ಹ ವ್ಯಕ್ತಿಗಳಿಗೆ ಅನ್ಯಾಯವಾಗುತ್ತಿದೆ. ಈ ಪಟ್ಟಿಯನ್ನು ಸಾರ್ವಜನಿಕರ ಮುಂದೆ ತಿಳಿಸುವಂತೆ ಒತ್ತಾಯಿಸಿದ ಅವರು ಬೆಟ್ಟದತುಂಗ ಗ್ರಾಮದ ಸಾರ್ವಜನಿಕ ಆಸ್ಪತ್ರೆಗೆ ಮತ್ತು ಪಶು ಆಸ್ಪತ್ರೆಗೆ ವೈದ್ಯರಿಲ್ಲದೆ ಸಾರ್ವಜನಿಕರು ಪರೀತಪಿಸುವಂತ್ತಾಗಿದೆ. ಅಲ್ಲದೆ ಗ್ರಾಮದ ಸಮೀಪದಲ್ಲೇ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ಹಾದು ಹೋಗುವ ರಸ್ತೆ ಇದ್ದು ಅದನ್ನು ದುರಸ್ಥಿ ಮಾಡಿಕೊಡಬೇಕಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತೀನ್ ವೆಂಕಟೇಶ್, ತಹಸೀಲ್ದಾರ್ ನಿಸರ್ಗ ಪ್ರಿಯಾ, ತಾ ಪಂ ಕಾರ್ಯ ನಿರ್ವಹಕಾಧಿಕಾರಿ ಸುನೀಲ್ ಕುಮಾರ್, ಮೈಮುಲ್ ನಿರ್ದೇಶಕ ಪ್ರಕಾಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಈಚೂರ್ ಲೋಕೇಶ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೆಶಕ ಡಾ.ಸೋಮಯ್ಯ, ಲೋಕೋಪಯೋಗಿ ಅಭಿಯಂತರರಾದ ವೆಂಕಟೇಶ್, ದಿನೇಶ್, ಕುಮಾರ್ ವಿವಿಧ ಇಲಾಖೆಗಳ ಅಧಿಕಾರಿಗಳಾದ ಕೃಷ್ಣ ಮೂರ್ತಿ, ಮಲ್ಲಿಕಾರ್ಜುನ, ಮಾದೇಶ್, ಅಹಮ್ಮದ್, ಲೋಹಿತ್, ಮುನಿಯಪ್ಪ, ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಪಿಡಿಒ ನಾಗೇಂದ್ರ ಕುಮಾರ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ, ಕೆಡಿಪಿ ಸದಸ್ಯ ಆಯತನಹಳ್ಳಿ ಮಹದೇವ್, ವಕೀಲ ಕೆ.ಶಂಕರ್, ಮುಖಂಡರಾದ ಆರ್.ಟಿ.ರೇವಣ್ಣ, ಆರ್.ಎಸ್.ಮಹದೇವ್, ಆರ್.ತುಂಗಾ ಪರಮೇಶ್, ಆರ್.ಎಸ್. ಹರೀಶ್, ಪಿ.ಮಹದೇವ್, ಶೇಖರ್, ಕಾಮರಾಜ್, ಶಿವಶಂಕರ್, ಶಿವರುದ್ರ, ಚನ್ನಕಲ್ ಶೇಖರ್, ಆಯಿತನಹಳ್ಳಿ ಮಂಜು, ಸಣ್ಣ ಸ್ವಾಮಿಗೌಡ, ಆಯಿತನಹಳ್ಳಿ ಗಣೇಶ್, ಪ್ರೀತಿ ಅರಸ್, ಹುಣಸೇಕುಪ್ಪೆ ಶ್ರೀನಿವಾಸ್, ಪ್ರಕಾಶ್, ಮೋಹನ್ ಕುಮಾರ್, ಚೌಕೂರು ರಾಜಣ್ಣ, ಅರವಿಂದ್ ರಾಜೇ ಅರಸ್, ರಾಜು, ತಮ್ಮಣ್ಣಯ್ಯ, ಪ್ರಕಾಶ್ ರಾಜೇ ಅರಸ್, ವಿಜಯ ದೇವರಾಜೆ ಅರಸ್, ಚಿಕ್ಕೇಗೌಡ, ಸಣ್ಣಯ್ಯ, ಕೃಷ್ಣೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.














