ಮನೆ ಕಾನೂನು ಯಾವುದೇ ಸಂಸ್ಥೆ ಪರಿಪೂರ್ಣವಲ್ಲ: ಸಿಜೆಐ ಡಿ ವೈ ಚಂದ್ರಚೂಡ್

ಯಾವುದೇ ಸಂಸ್ಥೆ ಪರಿಪೂರ್ಣವಲ್ಲ: ಸಿಜೆಐ ಡಿ ವೈ ಚಂದ್ರಚೂಡ್

0

ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಯಾವುದೇ ಸಂಸ್ಥೆ ನೂರಕ್ಕೆ ನೂರರಷ್ಟು ಪರಿಪೂರ್ಣವಲ್ಲ ಮತ್ತು ನ್ಯಾಯಮೂರ್ತಿಗಳ ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಯನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಶುಕ್ರವಾರ ಹೇಳಿದರು.

ಸಂವಿಧಾನ ದಿನದ ಅಂಗವಾಗಿ ದಿನಾಚರಣೆಯ ಮುನ್ನಾದಿನವಾದ ಶುಕ್ರವಾರ ಸುಪ್ರೀಂ ಕೋರ್ಟ್ ವಕೀಲರ ಸಂಘ ನವದೆಹಲಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ನ್ಯಾಯಮೂರ್ತಿಗಳು ಸಂವಿಧಾನವನ್ನು ಜಾರಿಗೆ ತರುವ ನಿಷ್ಠಾವಂತ ಸಿಪಾಯಿಗಳು ಎಂದು ಅವರು ಹೇಳಿದರು. ಇತ್ತೀಚೆಗೆ ಕೊಲಿಜಿಯಂ ವಿರುದ್ಧ ವಿವಿಧ ವಲಯಗಳಿಂದ ಬಂದ ಟೀಕೆಗಳ ಹಿನ್ನೆಲೆಯಲ್ಲಿ ಅವರ ಮಾತು ಮಹತ್ವ ಪಡೆದುಕೊಂಡಿದೆ.

“…ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಯಾವುದೇ ಸಂಸ್ಥೆ ಪರಿಪೂರ್ಣವಲ್ಲ. ನಾವು ಸಂವಿಧಾನದ ಚೌಕಟ್ಟಿನೊಳಗೆ ಕೆಲಸ ಮಾಡುತ್ತೇವೆ. ನಾವು ಸಂವಿಧಾನವನ್ನು ಅನುಷ್ಠಾನಗೊಳಿಸುವ ನಿಷ್ಠಾವಂತ ಸೈನಿಕರು” ಎಂದು ಅವರು ಹೇಳಿದರು. ನಾವು ಅಪೂರ್ಣತೆಗಳ ಬಗ್ಗೆ ಮಾತನಾಡುವಾಗ ಅಸ್ತಿತ್ವದಲ್ಲಿರುವ ವ್ಯವಸ್ಥೆಯಲ್ಲಿ ನಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುವುದೇ ಪರಿಹಾರವಾಗಿದೆ” ಎಂದು ಕೂಡ ಅವರು ತಿಳಿಸಿದರು.

ಕೇವಲ ಕೊಲಿಜಿಯಂ ವ್ಯವಸ್ಥೆಯನ್ನು ಸುಧಾರಿಸುವುದರಿಂದ ಅಥವಾ ನ್ಯಾಯಮೂರ್ತಿಗಳ ವೇತನ ಹೆಚ್ಚಳ ಮಾಡುವುದರಿಂದ ಉತ್ತಮ ಮತ್ತು ಅರ್ಹರು ನ್ಯಾಯಪೀಠಕ್ಕೆ ಸೇರಿದಂತಾಗುವುದಿಲ್ಲ ಎಂದ ಅವರು ಆತ್ಮಸಾಕ್ಷಿಯಂತೆ ನಡೆದುಕೊಳ್ಳುವ ಸಾರ್ವಜನಿಕ ಸೇವೆಗೆ ಬದ್ಧರಾಗಿರುವ ವಕೀಲರು ನ್ಯಾಯಾಧೀಶರಾಗಿ ಪೀಠದ ಭಾಗವಾಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಜಗಳ ಅರ್ಥಹೀನವಾದುದು, ಏಕೆಂದರೆ ಅವು ಒಂದೇ ಸಂವಿಧಾನದ ಸೃಷ್ಟಿಯಾಗಿವೆ. ಹಾಗಾಗಿ ನ್ಯಾಯಾಂಗದ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ರಕ್ಷಿಸುತ್ತದೆ ಎಂದು ಅವರು ಭರವಸೆ ನೀಡಿದರು.

 “ಭಾರತೀಯ ನ್ಯಾಯಾಂಗದ ಸ್ವಾತಂತ್ರ್ಯ ಅಖಂಡವಾಗಿ ಮತ್ತು ಅಬಾಧಿತವಾಗಿರುವಂತೆ ನಾವು ನೋಡಿಕೊಳ್ಳುತ್ತೇವೆ. ನಾವು (ಕಾರ್ಯಾಂಗ ಮತ್ತು ನ್ಯಾಯಾಂಗ) ಒಂದೇ ತಂದೆತಾಯಿಯ ಮಕ್ಕಳು. ನಾವು ಒಂದೇ ಸ್ವರೂಪದವರಾಗಿದ್ದು  ನಮ್ಮ ನಡುವೆ ಜಗಳವಾಡುವುದರಿಂದ ಯಾವುದೇ ಪ್ರಯೋಜನವಿಲ್ಲ” ಅವರು ಹೇಳಿದರು.

“ಕಳೆದ 8.5 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಸಂವಿಧಾನದ ಪಾವಿತ್ರ್ಯತೆಗೆ ಧಕ್ಕೆ ತರುವ ಯಾವುದೇ ಕೆಲಸ ಮಾಡಿಲ್ಲ, ಸಂವಿಧಾನವನ್ನು ತಿದ್ದುಪಡಿ ಮಾಡಬಹುದು ಆದರೆ ಸಂವಿಧಾನದ ಆಶಯವನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಎಸ್ಸಿಬಿಎ ಅಧ್ಯಕ್ಷ ವಿಕಾಸ್ ಸಿಂಗ್ ಮತ್ತಿತರರು ಪಾಲ್ಗೊಂಡಿದ್ದರು.

ಹಿಂದಿನ ಲೇಖನನಟ ಚೇತನ್ ವಿರುದ್ಧದ ಎಫ್’ಐಆರ್ ರದ್ದುಗೊಳಿಸಲು ಹೈಕೋರ್ಟ್ ನಕಾರ
ಮುಂದಿನ ಲೇಖನಗ್ರಾಮ ಪಂಚಾಯತ್’ಗಳಿಗೆ ಸಂವಿಧಾನದ ಪ್ರತಿ ಹಂಚಿಕೆ: ಸಿಎಂ ಬೊಮ್ಮಾಯಿ