ಮನೆ ರಾಜ್ಯ ಬಿಎಸ್ವೈ ಅವರು ನಿವೃತ್ತಿ ಪಡೆಯುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ

ಬಿಎಸ್ವೈ ಅವರು ನಿವೃತ್ತಿ ಪಡೆಯುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ

0

ನವದೆಹಲಿ (New Delhi): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯ ನಿವೃತ್ತಿ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ದೆಹಲಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ನಿರಂತರ ಪರಿಶ್ರಮದ ನಾಯಕ, ಅವರಿಗೆ ರಾಜಕೀಯ ಬಿಡುವು ಅನ್ನುವುದೇ ಇಲ್ಲ, ರಾಜಕೀಯದಲ್ಲಿ ನಿರಂತರವಾಗಿ ಬಿಎಸ್ ವೈ ಇರುತ್ತಾರೆ, ಹೋರಾಟವೇ ಅವರ ಬದುಕಿನ ಮೂಲಮಂತ್ರ ಎಂದಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪನವರ ಬಲ, ಮಾರ್ಗದರ್ಶನ ಇರಲಿದೆ ಯಡಿಯೂರಪ್ಪ ಅವರಿಗೆ ಸುಸ್ತಾಗಲಿ, ನಿವೃತ್ತಿಯಾಗಲಿ ಇಲ್ಲ. ಅವರು ನಿರಂತರ ಹೋರಾಟಗಾರರು. ಅವರು ಬಿಜೆಪಿ ಜತೆಗೆ ಸದಾ ಇದ್ದಾರೆ. ಅವರಿಗೆ ತಮ್ಮದೇ ಆದ ಮಹತ್ವವಿದ್ದು, ಪಕ್ಷದ ವರಿಷ್ಠರಿಗೂ ಅವರ ಮಹತ್ವದ ಅರಿವಿದೆ. ಕಳೆದ ಬಾರಿ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಈ ಬಗ್ಗೆ ಏನೂ ಚರ್ಚಿಸಿಲ್ಲ. ಮುಂದಿನ ಬಾರಿ ಭೇಟಿಯಾದಾಗ ಚರ್ಚಿಸಲಾಗುವುದು ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಚುನಾವಣಾ ರಾಜಕೀಯಕ್ಕೆ ದಿಢೀರ್ ನಿವೃತ್ತಿ ಘೋಷಿಸಿ ತಾವು ಇಷ್ಟು ವರ್ಷಗಳ ಕಾಲ ಪ್ರತಿನಿಧಿಸಿಕೊಂಡು ಬರುತ್ತಿದ್ದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಬಿ ವೈವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಘೋಷಿಸಿದ್ದಾರೆ. ರಾಜ್ಯ ರಾಜಕೀಯದಲ್ಲಿ, ಬಿಜೆಪಿಯಲ್ಲಿ ಬಿಎಸ್ ವೈ ಅವರ ಈ ಹೇಳಿಕೆ ತಲ್ಲಣ ಮೂಡಿಸಿದೆ. ಮುಂದಿನ ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರಬಹುದು, ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳಹುದು ಎಂಬ ವಿಚಾರಗಳು ಚರ್ಚೆಯಾಗುತ್ತಿದೆ.