ತಾನು ಬದುಕಿರುವವರೆಗೂ ಸಂವಿಧಾನದ ಮೂಲಭೂತ ಅಂಶಗಳೊಂದಿಗೆ ಆಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ತಮ್ಮ ಅಧಿಕಾರಾವಧಿಯಲ್ಲಿ ಸಂವಿಧಾನ ತಿದ್ದುಪಡಿ ಮಾಡಿದ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಗಾಂಧಿ ಕುಟುಂಬದ ನಾಲ್ವರು ಮಾಜಿ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಸಂವಿಧಾನದೊಂದಿಗೆ ಚೆಲ್ಲಾಟವಾಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ತಿದ್ದುಪಡಿ ಮಾಡಲಾಗುವುದು ಎಂದು ಪ್ರತಿಪಕ್ಷಗಳು ಹೇಳುತ್ತಿರುವ ಬಗ್ಗೆ ಕೇಳಿದಾಗ ಪ್ರಧಾನಿ ಮೋದಿ, ಇದು ಕೇಳಲೇಬೇಕಾದ ಪ್ರಶ್ನೆ, ಸಂವಿಧಾನದೊಂದಿಗೆ ಮೊದಲು ಆಟವಾಡಿದವರು ಯಾರು? ಪಂಡಿತ್ ನೆಹರು ಅವರು ವಾಕ್ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಉದ್ದೇಶಿಸಿರುವ ಮೊದಲ ತಿದ್ದುಪಡಿಯನ್ನು ತಂದರು ಎಂದರು.
ಮಾಧ್ಯಮವನ್ನು ನಿರ್ಬಂಧಿಸಲು ಅವರು ಕಾನೂನನ್ನು ತಂದರು. ಮತ್ತೊಂದು ತುರ್ತು ಪರಿಸ್ಥಿತಿ ಹೇರಲು ಅವಕಾಶ ನೀಡುವುದಿಲ್ಲ. 2013 ರಲ್ಲಿ ಕೇಂದ್ರ ಸಚಿವ ಸಂಪುಟವು ಅಂಗೀಕರಿಸಿದ ಸುಗ್ರೀವಾಜ್ಞೆಯ ಪ್ರತಿಯನ್ನು ಹರಿದು ಹಾಕಿದ್ದಕ್ಕಾಗಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಟೀಕಿಸಿದರು. ನಂತರ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಸುಗ್ರೀವಾಜ್ಞೆಯನ್ನು ಹಿಂತೆಗೆದುಕೊಂಡಿತು.
ತಮ್ಮ ಅಧಿಕಾರಾವಧಿಯಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ಅನುಮತಿಸುವುದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು. ಒಂದೇ ಕುಟುಂಬದ ನಾಲ್ವರು ವಿವಿಧ ಕಾಲಘಟ್ಟದಲ್ಲಿ ಸಂವಿಧಾನವನ್ನು ಧ್ವಂಸ ಮಾಡಿದ್ದಾರೆ. ಮೋದಿ ಬದುಕಿರುವವರೆಗೆ ಸಂವಿಧಾನದ ಮೂಲಭೂತ ಅಂಶಗಳಲ್ಲಿ ಯಾವುದೇ ಬದಲಾವಣೆಗೆ ನಾನು ಅವಕಾಶ ನೀಡುವುದಿಲ್ಲ, ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ನಾನು ಅನುಮತಿಸುವುದಿಲ್ಲ ಎಂದು ಮೋದಿ ಹೇಳಿದರು.