ಬೆಂಗಳೂರು: ಸಿಂಗಾಪುರದಲ್ಲಿ ಸರ್ಕಾರವನ್ನು ಉರುಳಿಸಲು ಷಡ್ಯಂತ್ರ ನಡೆದಿರುವ ಬಗ್ಗೆ ನನಗೆ ಗೊತ್ತಿಲ್ಲ. ಹೇಳಿಕೆ ನೀಡಿರುವ ಡಿ.ಕೆ.ಶಿವಕುಮಾರ್ ಅವರನ್ನೇ ಕೇಳಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಹವಾಮಾನ ಬದಲಾವಣೆಯಿಂದ ಮಳೆ ಕೊರತೆ: ಮೌಢ್ಯಗಳಲ್ಲಿ ನಂಬಿಕೆಯಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರ ಬರುತ್ತದೆ ಎಂದು ಬಿಜೆಪಿಯವರು ಟ್ರೋಲ್ ಮಾಡಿರುವ ಬಗ್ಗೆ ಉತ್ತರಿಸಿ ಈಗ ಮಳೆಯಾಗುತ್ತಿಲ್ಲವೇ ಎಂದು ಪ್ರಶ್ನಿಸಿದರು. ಈ ಮೂಢ ನಂಬಿಕೆ ಗಳಲ್ಲಿ ಹಾಗೂ ಮೌಢ್ಯಗಳಲ್ಲಿ ನನಗೆ ನಂಬಿಕೆ ಇಲ್ಲ. ಬಿಜೆಪಿ ಅಧಿಕಾರದ ಅವಧಿಯಲ್ಲಿ ಪ್ರವಾಹ ಬಂದು ಒಂದು ಲಕ್ಷ ಮನೆಗಳು ಬಿದ್ದುಹೋಗಿದ್ದವು. ಪ್ರವಾಹ ಉಂಟಾಗುವುದು ಹಾಗೂ ಮಳೆ ಕೊರತೆಯಾಗುವುದು ಸ್ವಾಭಾವಿಕ. ಈಗ ಹವಾಮಾನ ಬದಲಾವಣೆ ಇದೆ. ಮುಂಗಾರು ಜೂನ್ ತಿಂಗಳಲ್ಲಿ ಪ್ರಾರಂಭವಾಗುವುದು ಜುಲೈನಲ್ಲಿ ಆಗುತ್ತಿದೆ. ಜಗತ್ತಿನ ಎಲ್ಲೆಡೆ ಹವಾಮಾನ ಬದಲಾವಣೆಯಾಗುತ್ತಿದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 15 – 20 ಸ್ಥಾನ ಗೆಲ್ಲಲಿದೆ
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಂದಾಗುತ್ತಿರುವ ಬಗ್ಗೆ ನನಗೆ ತಿಳಿದಿಲ್ಲ ಮಾತುಕತೆ ನಡೆಸುತ್ತಿದ್ದಾರೆ. ಅವರು ಒಂದಾದರೆ ನಮಗೇನೂ ಭಯವಿಲ್ಲ. ನಾವು 15- 20 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ಅವರು ಒಂದಾದರೂ, ಒಂದಾಗದೇ ಇದ್ದರು ಗೆಲ್ಲುತ್ತೇವೆ ಎಂದರು.