ಮನೆ ರಾಜಕೀಯ ಬಿಜೆಪಿ ಸೇರುವ ಬಗ್ಗೆ ಚರ್ಚಿಸಿಲ್ಲ, ಯಾವುದೇ ಪಕ್ಷ ಸೇರುವ ಅವಶ್ಯಕತೆ ಇಲ್ಲ: ಸುಮಲತಾ ಅಂಬರೀಷ್‌

ಬಿಜೆಪಿ ಸೇರುವ ಬಗ್ಗೆ ಚರ್ಚಿಸಿಲ್ಲ, ಯಾವುದೇ ಪಕ್ಷ ಸೇರುವ ಅವಶ್ಯಕತೆ ಇಲ್ಲ: ಸುಮಲತಾ ಅಂಬರೀಷ್‌

0

ಮದ್ದೂರು (Maddur)-ಬಿಜೆಪಿ ಸೇರುವ ಬಗ್ಗೆ ಚರ್ಚಿಸಿಲ್ಲ, ಸದ್ಯಕ್ಕೆ ತಮಗೆ ಯಾವುದೇ ಪಕ್ಷ ಸೇರುವ ಅವಶ್ಯಕತೆ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್‌ (Sumalatha Ambareesh) ಹೇಳಿದ್ದಾರೆ.

ಮದ್ದೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾತುಕತೆ ನಡೆದಿಲ್ಲ. ತಾವಾಗಲಿ, ತಮ್ಮ ಪುತ್ರ ಅಭಿಷೇಕ್‌ ಆಗಲಿ ಯಾರ ಬಳಿಗೂ ಮುಂದಿನ ಚುನಾವಣೆ ಸಂಬಂಧ ಟಿಕೆಟ್‌ ಕೇಳಿಕೊಂಡು ಹೋಗಿಲ್ಲ ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಸಾಮಾಜಿಕ ಜಾಲ ತಾಣಗಳು ಮತ್ತು ಕೆಲ ಮಾಧ್ಯಮಗಳು ಈ ವಿಷಯವಾಗಿ ಹರಿಬಿಡುತ್ತಿರುವ ಸುದ್ದಿಗಳಿಗೆ ಮಹತ್ವವಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಮತ್ತು ರಾಜ್ಯದಲ್ಲಿಅಧಿಕಾರದಲ್ಲಿರುವ ಬಿಜೆಪಿ ಮುಖಂಡರನ್ನು ಭೇಟಿಯಾಗಿ ಚರ್ಚಿಸಿರುವೆ ಹೊರತೂ ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆಸಿಲ್ಲ. ಸಚಿವ ಅಶ್ವಥ್‌ನಾರಾಯಣ್‌ ಬಿಜೆಪಿ ಸೇರುವಂತೆ ಕೋರಿದ್ದು, ಸದ್ಯಕ್ಕೆ ತಮಗೆ ಯಾವುದೇ ಪಕ್ಷ ಸೇರುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದೆಯಾದ ತಮಗೆ ಕ್ಷೇತ್ರದ ಮತದಾರರು, ಅದರಲ್ಲೂ ವಿವಿಧ ಪಕ್ಷಗಳ ಕಾರ್ಯಕರ್ತರು ಪಕ್ಷಭೇದ ಮರೆತು ಬೆಂಬಲಿಸಿದ್ದಾರೆ. ಯಾವುದೇ ಪಕ್ಷ ಸೇರುವ ಬಗ್ಗೆ ಮತದಾರರ ತೀರ್ಮಾನ ಮುಖ್ಯವಾಗಿದ್ದು, ಸದ್ಯಕ್ಕೆ ಯಾವುದೇ ಮಾತುಕತೆ ನಡೆದಿಲ್ಲಎಂದು ಸ್ಪಷ್ಟನೆ ನೀಡಿದರು.

ಕೆಲ ಬೆಂಬಲಿಗರು ಬಿಜೆಪಿ ಸೇರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸುಮಲತಾ ಅವರು, ಯಾವುದೇ ಕಾರ್ಯಕರ್ತ, ಮುಖಂಡ ವೈಯಕ್ತಿಕವಾಗಿ ಅವಶ್ಯವಿರುವ ಪಕ್ಷಗಳಿಗೆ ಸೇರ್ಪಡೆಯಾಗುವ ಹಕ್ಕು ಹೊಂದಿದ್ದು, ಅವರಿಗೆ ಗೌರವ ಸ್ಥಾನಮಾನ ಸಿಗುವ ಕಡೆ ತೆರಳಿದಲ್ಲಿ ತಮ್ಮ ಅಭ್ಯಂತರವಿಲ್ಲ ಎಂದರು.

ಕನ್ನಡಕ್ಕೆ ಪ್ರಾಮುಖ್ಯತೆ

ಉತ್ತರ ಭಾರತದಲ್ಲಿ ಹಿಂದಿ ಭಾಷೆಗೆ ಪ್ರಾಮುಖ್ಯತೆ ಇದೆ. ಆದರೆ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಿಗೆ ಅವರ ಸ್ಥಳೀಯ ಭಾಷೆಗಳೇ ಮುಖ್ಯ. ನಮ್ಮ ರಾಜ್ಯದ ಭಾಷೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾದಲ್ಲಿ ಸಹಿಸುವ ಸ್ಥಿತಿ ಕನ್ನಡಿಗರದ್ದಲ್ಲ ಎಂದು ನಟ ಅಜಯ್‌ ದೇವಗನ್‌ ಅವರ ಹಿಂದಿ ಭಾಷೆ ಕುರಿತಾದ ಹೇಳಿಕೆಗೆ ಸಂಸದೆ ಸುಮಲತಾ ಅಂಬರೀಶ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.