ಮನೆ ರಾಜ್ಯ ಈಗಷ್ಟೇ ಅಲ್ಲ; ಮುಂದಿನ ಅವಧಿಯಲ್ಲೂ ಸಿದ್ದರಾಮಯ್ಯ ಅವರೇ ಸಿಎಂ ಇರಬಹುದು: ಶಿವಾನಂದ ಪಾಟೀಲ

ಈಗಷ್ಟೇ ಅಲ್ಲ; ಮುಂದಿನ ಅವಧಿಯಲ್ಲೂ ಸಿದ್ದರಾಮಯ್ಯ ಅವರೇ ಸಿಎಂ ಇರಬಹುದು: ಶಿವಾನಂದ ಪಾಟೀಲ

0

ಬೆಳಗಾವಿ: ಈಗಷ್ಟೇ ಅಲ್ಲ; ಮುಂದಿನ ಅವಧಿಯಲ್ಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರಬಹುದು. ಇದರಲ್ಲಿ ತಪ್ಪೇನಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಕೇಳಿದರು.

Join Our Whatsapp Group

ಮುಂದಿನ ಅವಧಿಯಲ್ಲೂ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವಶ್ಯಕತೆ ಇದೆ’ ಎಂಬ ಕೆಲವು ಸಚಿವರ ಹೇಳಿಕೆಗೆ, ಇಲ್ಲಿ ಸೋಮವಾರ ಅವರು ಹೀಗೆ ಪ್ರತಿಕ್ರಿಯಿಸಿದರು.

ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಸಿ.ಎಂ ಆಗಿ ಇರುತ್ತಾರಾ’ ಎಂಬ ಪ್ರಶ್ನೆಗೆ, ‘ಸಿ.ಎಂ ವಿಚಾರ ನಾನು ಭವಿಷ್ಯ ನುಡಿಯುವಂಥದ್ದಲ್ಲ. ಸಿ.ಎಂ ಸ್ಥಾನದಲ್ಲಿ ಯಾರನ್ನು ಮುಂದುವರಿಸಬೇಕು ಮತ್ತು ಬದಲಿಸಬೇಕು ಎಂಬುದನ್ನು ಸಿಎಲ್‌ಪಿ ಹಾಗೂ ಪಕ್ಷದ ಹೈಕಮಾಂಡ್‌ ನಿರ್ಧರಿಸುತ್ತದೆ’ ಎಂದರು.

ಹಾಗಾದರೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಪದೇಪದೆ ಏಕೆ ಚರ್ಚೆಯಾಗುತ್ತಿದೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಪಾಟೀಲ, ‘ಅದು ನನಗೆ ಗೊತ್ತಿಲ್ಲ. ನೀವೇ ಪದೇಪದೆ ಪ್ರಶ್ನೆ ಕೇಳುತ್ತೀರಿ ಎಂದು ಚರ್ಚೆಯಾಗುತ್ತಿದೆ. ಅವಶ್ಯಕತೆ ಇಲ್ಲದಿರುವುದನ್ನು ಕೇಳಿದರೆ ಏನೂ ಉಪಯೋಗವಿಲ್ಲ ಎಂದು ತಿಳಿಸಿದರು.

ಈ ವರ್ಷ ರಾಜ್ಯದಾದ್ಯಂತ ಕಬ್ಬು ನುರಿಸುವಿಕೆ ಪ್ರಮಾಣ, ಕಳೆದ ವರ್ಷಕ್ಕಿಂತ ಕಡಿಮೆ ಇರಲಿದೆ. ಈ ವರ್ಷ 5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ನಿರೀಕ್ಷೆಯಿದೆ. ಹಿಂದಿನ ವರ್ಷ ಬರಗಾಲವಿದ್ದ ಕಾರಣ, ಇಳುವರಿ ಮತ್ತು ಕಬ್ಬು ನುರಿಸುವಿಕೆ ಮೇಲೆ ಪರಿಣಾಮ ಬೀರಿದೆ. ಮುಂದಿನ ವರ್ಷ ನಾವು ಕಬ್ಬು ನುರಿಸುವ ಪ್ರಮಾಣದಲ್ಲಿ ಗುರಿ ಮೀರುವ ನಿರೀಕ್ಷೆಯಿದೆ ಎಂದರು.

ಕೆಲವು ಸಕ್ಕರೆ ಕಾರ್ಖಾನೆಗಳು ಶೇ 80ರಷ್ಟು ಕಬ್ಬಿನ್‌ ಬಿಲ್‌ ಪಾವತಿಸಿದ್ದರೆ, ಇನ್ನು ಕೆಲವು ಕಾರ್ಖಾನೆಗಳು ಶೇ 75ರವರೆಗೆ ಪಾವತಿಸಿವೆ. ಒಂದು ಭಾಗ ಮಾತ್ರ ಶೇ 55ರಿಂದ 60ರಷ್ಟು ಪಾವತಿಸಿದೆ. ರೈತರ ಎಲ್ಲ ಬಾಕಿ ಬಿಲ್‌ಗಳ ಶೀಘ್ರವೇ ಪಾವತಿಯಾಗಲಿವೆ ಎಂದು ಭಾವಿಸುತ್ತೇನೆ’ ಎಂದು ತಿಳಿಸಿದರು.

ರಾಜ್ಯದಾದ್ಯಂತ 72 ಸಕ್ಕರೆ ಕಾರ್ಖಾನೆಗಳಿವೆ. ಈ ಹಿಂದೆ ಅವರು ಕಬ್ಬಿನ ತೂಕ ಮಾಡಲು ಅನಲಾಗ್ ತೂಕದ ಯಂತ್ರಗಳನ್ನು ಬಳಸುತ್ತಿದ್ದರು. ಈಗ ಡಿಜಿಟಲ್ ತೂಕದ ಯಂತ್ರ ಬಳಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳಲ್ಲಿ ಸರ್ಕಾರದಿಂದಲೇ ತೂಕದ ಯಂತ್ರಗಳನ್ನು  ಅಳವಡಿಸಲು ನಿರ್ಧರಿಸಿದ್ದೇವೆ. ಮೊದಲ ಹಂತದಲ್ಲಿ ಎರಡು ಮೊಬೈಲ್ ತೂಕದ ಯಂತ್ರಗಳನ್ನು ಅಳವಡಿಸುತ್ತೇವೆ. ಸ್ಥಳಾವಕಾಶದ ಲಭ್ಯತೆ ಆಧರಿಸಿ ನಂತರದ ದಿನಗಳಲ್ಲಿ ಕಾರ್ಖಾನೆಗಳಲ್ಲಿ ಐದರಿಂದ ಆರು ಅಳವಡಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.