ಮೈಸೂರು: ನಕಲಿ ದಾಖಲೆಗಳನ್ನು ಸೃಷ್ಠಿಸಿ, ನಕಲಿ ವ್ಯಕ್ತಿಯನ್ನು ಹಾಜರುಪಡಿಸಿ ಅಸಲಿ ವ್ಯಕ್ತಿಯೆಂದು ಬಿಂಬಿಸಿ ನೋಂದಣಿ ಪತ್ರ ಮಾಡಿರುವ ಅಧಿಕಾರಿಗಳ ವಿರುದ್ಧ ಹಾಗೂ ಈ ಅಕ್ರಮದಲ್ಲಿ ಶಾಮೀಲಾದ ಉಪನೋಂದಣಾಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಹೋಬಳಿ ಚಿಕ್ಕಪಾಳ್ಯ ಗ್ರಾಮದಲ್ಲಿರುವ ನಿತೀಶ್ ಕುಮಾರ್ ಸಿ.ಪಿ. ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸ್ವತ್ತಿನ ನಂ.105 ಉಳ್ಳ ನಿವೇಶನವನ್ನು ಕ್ರಯಕ್ಕೆ ಪಡೆಯಲು ನಿತೀಶ್ ಕುಮಾರ್ ವ್ಯವಹರಿಸಿದ್ದು, ಎಸ್ ಚಿದಾನಂದ, ಎಸ್ ನಂದೀಶ್, ಎಸ್ ನಿತ್ಯಾನಂದ ಅವರು ಶ್ರೀರಂಗಪಟ್ಟಣ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ 1ನೇ ಪುಸ್ತಕದ ನೋಂದ 04044:24:25 ರಂತೆ ನೋಂದಾಯಿತವಾಗಿರುವ ಹಕ್ಕು ಖುಲಾಸೆ ಪತ್ರ ಮಾಡಿಕೊಟ್ಟಿರುತ್ತಾರೆ. ಸದರಿ ಹಕ್ಕು ಖುಲಾಸೆ ಪತ್ರದಲ್ಲಿ ನಮೂದು ಮಾಡಿರುವ ಎಸ್ ನಿತ್ಯಾನಂದ ಎಂಬ ವ್ಯಕ್ತಿ ನೈಜ ವ್ಯಕ್ತಿಯಲ್ಲ. ಈತ ಶ್ರೀರಂಗಪಟ್ಟಣದಲ್ಲಿ ವಾಸವಿರುವ ಬೇರೆ ವ್ಯಕ್ತಿ. ಪತ್ರದಲ್ಲಿ ನೈಜ ವ್ಯಕ್ತಿಯ ಬದಲಾಗಿ ಅನಾಮಿಕ ವ್ಯಕ್ತಿಯ ಫೋಟೋ ಹಾಕಲಾಗಿದೆ. ಪತ್ರದಲ್ಲಿರುವ ಸಹಿಗಳು ಕೂಡ ಎಸ್. ನಿತ್ಯಾನಂದ ಅವರದ್ದಲ್ಲ. ಈ ಪತ್ರಕ್ಕೆ ಅಧಿಕೃತ ಪತ್ರ ಬರಹಗಾರರಾದ ದಿನೇಶ್, ಪರವಾನಗಿ ಸಂ. 22:2009.10 ರವರು ಬಿಕ್ಲಂ ಹಾಕಿದ್ದು, ಸದರಿ ಪತ್ರದಲ್ಲಿ ನೋಂದಣಿ ವೇಳೆ ಉಪ ನೋಂದಣಾಧಿಕಾರಿ ಮಂಜುದರ್ಶಿನಿ ಕರ್ತವ್ಯದಲ್ಲಿದ್ದರು.

ಕಾನೂನಿನ ವಿರುದ್ಧವಾಗಿ ನೋಂದಣಿ ಮಾಡಿಸಿರುವುದಲ್ಲದೇ ಸದರಿ ನಕಲಿ ವ್ಯಕ್ತಿಯ ಎಡಗೈ ಹೆಬ್ಬೆರಳಿನ ಗುರುತಿನ ಸಹಿ ಹೇಗೆ ಅಂಗೀಕಾರವಾಯಿತು ಎಂಬುದು ಯಕ್ಷಪ್ರಶ್ನೆಯಾಗಿದೆ.
2024ರ ಡಿಸೆಂಬರ್ 19 ರಂದು ಎಸ್ ನಿತ್ಯಾನಂದ ಅವರಿಗೆ ಚಿ.ಸಂಗ್ರಿಗೌಡ ಶ್ರೀರಂಗಪಟ್ಟಣ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ 1ನೇ ಪುಸ್ತಕದ ನೋಂದಣಿ ಸಂ.06427:2024-25 ರಂತೆ ನೊಂದಾಯಿತವಾಗಿರುವ ದಾನ ಪತ್ರದ ತಿದ್ದುಪಡಿ ಪತ್ರ ನೋಂದಣಿಯಾಗಿದ್ದು, ಸದರಿ ನೋಂದಣಿ ದಾನಪತ್ರ ತಿದ್ದುಪಡಿ ಪತ್ರದಲ್ಲಿ ನಮೂದಾಗಿರುವ ಎಸ್.ನಿತ್ಯಾನಂದ ಅವರ ಭಾವಚಿತ್ರ, ಸಹಿ ನೈಜವಾಗಿವೆ. ಅಧಿಕಾರಿಗಳು ಈ ಎರಡು ಪತ್ರದಲ್ಲಿರುವ ಎಸ್. ನಿತ್ಯಾನಂದ ಅವರ ಭಾವಚಿತ್ರ, ಸಹಿ ಪರಿಶೀಲಿಸಿದರೆ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ. ಪತ್ರದಲ್ಲಿ ನಮೂದಾಗಿರುವ ವಯಸ್ಸಿನಲ್ಲಿ ವ್ಯತ್ಯಾಸವಿದ್ದು, ಪರಿಶೀಲಿಸಬಹುದಾಗಿರುತ್ತದೆ.
ಈ ಅಕ್ರಮದಲ್ಲಿ ಉಪನೋಂದಣಾಧಿಕಾರಿ ಮಂಜುದರ್ಶಿನಿ, ಅಧಿಕೃತ ಪತ್ರ ಬರಹಗಾರರಾದ ದಿನೇಶ್, ಎಸ್.ಚಿದಾನಂದ, ಎಸ್ ನಂದೀಶ ಹಾಗೂ ನಕಲಿ ವ್ಯಕ್ತಿಯಾದ ಸ್ವರೂಪ್ ಭಾಗಿಯಾಗಿದ್ದು, ಈ ಕುರಿತು ಸಮರ್ಪಕ ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.