ಪತಿ – ಪತ್ನಿ ಮಧ್ಯೆ ಹೊಂದಾಣಿಕೆ ಸಾಧ್ಯವಿಲ್ಲ ಎಂದಾಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗುತ್ತದೆ. ಇಬ್ಬರ ವಾದವನ್ನು ಆಲಿಸುವ ಕೋರ್ಟ್ ನಂತ್ರ ವಿಚ್ಛೇದನದ ತೀರ್ಪು ನೀಡುತ್ತದೆ. ವಿಚ್ಛೇದನ ನಂತರ ಪತ್ನಿಯಾದವಳು ಪತಿಯಿಂದ ಜೀವನಾಂಶ ಪಡೆಯುತ್ತಾಳೆ. ಇದು ಬಹುತೇಕ ಎಲ್ಲರಿಗೂ ತಿಳಿದಿರುವ ಸಂಗತಿ. ಪತಿ ಸಹ ವಿಚ್ಛೇದನದ ನಂತರ ಪತ್ನಿಯಿಂದ ಜೀವನಾಂಶವನ್ನು ಕೇಳಬಹುದು. ಈ ಸಂಗತಿ ಅನೇಕರಿಗೆ ತಿಳಿದಿಲ್ಲ. ಇದು ಹೊಸ ನಿಯಮವೇನಲ್ಲ. ಸರ್ಕಾರ ಬಹಳ ಹಿಂದೆಯೇ ಇದನ್ನು ಜಾರಿಗೆ ತಂದಿದೆ. ಆದರೆ ಅನೇಕರಿಗೆ ಪತಿ ಜೀವನಾಂಶ ಪಡೆಯಬಹುದು ಎಂಬ ಸಂಗತಿ ತಿಳಿದಿಲ್ಲ.
ಏಪ್ರಿಲ್ 17, 1992 ರಂದು ದಂಪತಿ ವಿಚ್ಛೇದನದ ನಿರ್ಧಾರ ತೆಗೆದುಕೊಂಡಿದ್ದರು. ಈ ಬಗ್ಗೆ ಕೋರ್ಟ್ ನಲ್ಲಿ ಪತ್ನಿ ಅರ್ಜಿ ಸಲ್ಲಿಸಿದ್ದಳು. 2015ರಲ್ಲಿ ನಾಂದೇಡ್ ನ್ಯಾಯಾಲಯ ವಿಚ್ಛೇದನಕ್ಕೆ ಒಪ್ಪಿಗೆ ನೀಡಿತ್ತು. ಆದರೆ ಇಲ್ಲಿಗೆ ಈ ಪ್ರಕರಣ ಮುಗಿದಿರಲಿಲ್ಲ. ಮಹಿಳೆ ಪತಿ ಕೆಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ. ಪತ್ನಿ ತನಗೆ ಜೀವನಾಂಶ ನೀಡಬೇಕೆಂದು ಅರ್ಜಿಯಲ್ಲಿ ಹೇಳಿದ್ದ. ತನಗೆ ಯಾವುದೇ ಆದಾಯದ ಮೂಲವಿಲ್ಲ. ಪತ್ನಿ ವಿದ್ಯಾವಂತೆ. ಎಂಎ, ಬಿಎಡ್ ಮುಗಿಸಿದ್ದಾಳೆ. ಆಕೆ ಶಿಕ್ಷಕಿ. ಹಾಗಾಗಿ ಪತ್ನಿ ಪ್ರತಿ ತಿಂಗಳು 15 ಸಾವಿರ ರೂಪಾಯಿ ನೀಡಬೇಕೆಂದು ಅರ್ಜಿಯಲ್ಲಿ ಹೇಳಿದ್ದ. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಪ್ರತಿ ತಿಂಗಳು ಪತ್ನಿ, ತನ್ನ ಪತಿಗೆ ಮೂರು ಸಾವಿರ ರೂಪಾಯಿ ನೀಡಬೇಕೆಂದು ಆದೇಶ ನೀಡಿತ್ತು. ನೀವು ಕೂಡ ಪತ್ನಿಯಿಂದ ಜೀವನಾಂಶ ಕೇಳಬಹುದು.
ಜೀವನಾಂಶ ಎಂದರೇನು ? : ಒಬ್ಬ ವ್ಯಕ್ತಿ ಆಹಾರ, ಬಟ್ಟೆ, ಮನೆ, ಶಿಕ್ಷಣ ಮತ್ತು ವೈದ್ಯಕೀಯದಂತಹ ಮೂಲಭೂತ ಅವಶ್ಯಕತೆಗಳಿಗಾಗಿ ಇನ್ನೊಬ್ಬರಿಗೆ ಆರ್ಥಿಕ ಸಹಾಯ ಮಾಡಿದರೆ ಅದನ್ನು ಜೀವನಾಂಶ ಎಂದು ಕರೆಯಲಾಗುತ್ತದೆ. ನಿಮ್ಮ ಪತ್ನಿ ಕೆಲಸ ಮಾಡಿ ಸಂಪಾದಿಸುತ್ತಿದ್ದು, ಆಕೆ ವಿಚ್ಛೇದನ ಪಡೆದರೆ ನೀವು ಆಕೆಯಿಂದ ಜೀವನಾಂಶಕ್ಕೆ ಅರ್ಜಿ ಸಲ್ಲಿಸಬಹುದು.
ಎಲ್ಲಿ ಅರ್ಜಿ ಸಲ್ಲಿಕೆ? : ವಿಚ್ಛೇದನ ಪಡೆದ ನಂತ್ರ ಪತಿ ಅಥವಾ ಪತ್ನಿ ಜೀವನಾಂಶ ಬಯಸಿದ್ದರೆ ಕೋರ್ಟ್ ನಲ್ಲಿಯೇ ಜೀವನಾಂಶಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಕೋರ್ಟ್ ನಿಮ್ಮ ಅರ್ಜಿ ವಿಚಾರಣೆ ನಡೆಸುತ್ತದೆ. ಇಬ್ಬರ ವಾದವನ್ನು ಆಲಿಸಿದ ನಂತರ ಕೋರ್ಟ್ ತೀರ್ಮಾನ ತೆಗೆದುಕೊಳ್ಳುತ್ತದೆ. ಸಂದರ್ಭಕ್ಕೆ ತಕ್ಕಂತೆ ನ್ಯಾಯಾಲಯಗಳು ಜೀವನಾಂಶವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಅಥವಾ ಅದನ್ನು ರದ್ದುಗೊಳಿಸಬಹುದು. ಜೀವನಾಂಶ ಎಷ್ಟು ಎಂಬುದಕ್ಕೆ ಯಾವುದೇ ನಿಶ್ಚಿತ ಸೂತ್ರವಿಲ್ಲ. ಪ್ರಕರಣದ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ. ಅದು ನ್ಯಾಯಾಲಯಗಳ ವಿವೇಚನೆಗೆ ಬಿಟ್ಟದ್ದು.
ಜೀವನಾಂಶ ನಿಯಮಗಳು : ಕೋಡ್ ಆಫ್ ಕ್ರಿಮಿನಲ್ ಸೆಕ್ಷನ್ 125 ರ ಅಡಿಯಲ್ಲಿ ಪತ್ನಿ, ಮಗು ಅಥವಾ ಪೋಷಕರಂತಹ ಅವಲಂಬಿತರು ಜೀವನಾಂಶವನ್ನು ಕೇಳಬಹುದು. ಆದಾಯಕ್ಕೆ ಬೇರೆ ಯಾವುದೇ ಇತರ ಮಾರ್ಗಗಗಳು ಇಲ್ಲವೆಂದಾಗ ಜೀವನಾಂಶ ಪಡೆಯಬಹುದು. ಜೀವನಾಂಶದಲ್ಲಿ ಎರಡು ವಿಧಗಳಿವೆ. ಒಂದು ಮಧ್ಯಂತರ ಮತ್ತೊಂದು ಶಾಶ್ವತ. ನ್ಯಾಯಾಲಯದಲ್ಲಿ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲವೆಂದಾಗ ಮಧ್ಯಂತರ ಜೀವನಾಂಶವನ್ನು ಆದೇಶಿಸಬಹುದು. ವಿಚ್ಛೇದನದ ಪ್ರಕರಣಗಳಲ್ಲಿ ಗಂಡ ಅಥವಾ ಹೆಂಡತಿ ಮರುಮದುವೆಯಾಗುವವರೆಗೆ ಅಥವಾ ಸಾಯುವವರೆಗೆ ಶಾಶ್ವತ ಜೀವನಾಂಶವು ಜಾರಿಯಲ್ಲಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಜೀವನಾಂಶ ಪಡೆಯುವ ಟ್ರೆಂಡ್ ಜೋರಾಗಿದೆ. ಇದಕ್ಕೆ ಕಠಿವಾಣ ಹಾಕಲು ಕೋರ್ಟ್ ಮುಂದಾಗಿದೆ. ಅಗ್ಯವಿರುವಷ್ಟು ಹಣಕ್ಕೆ ಮಾತ್ರ ಅರ್ಜಿ ಸಲ್ಲಿಸಬೇಕು. ಪತ್ನಿ ಅಗತ್ಯದ ಪಟ್ಟಿಯನ್ನು ದೊಡ್ಡದು ಮಾಡುವ ಸಾಧ್ಯತೆಯಿರುತ್ತದೆ. ಇಲ್ಲವೆ ಪತಿ ತನ್ನ ಆದಾಯವನ್ನು ಕಡಿಮೆ ತೋರಿಸುವ ಸಾಧ್ಯತೆಯೂ ಇದೆ. ಹಾಗಾಗಿ ಇಬ್ಬರಿಂದಲೂ ಸೂಕ್ತ ದಾಖಲೆ ಪಡೆದ ನಂತ್ರ ಜೀವನಾಂಶ ನಿರ್ಧರಿಸಬೇಕೆಂದು ಕೋರ್ಟ್ ಈ ಹಿಂದೆ ಹೇಳಿತ್ತು.