ಮನೆ ರಾಜ್ಯ ಬೆಂಗಳೂರಿನ 86 ಪಬ್‌, ಬಾರ್‌ ಗಳಿಗೆ ನೋಟಿಸ್​​, 12 ಬಂದ್

ಬೆಂಗಳೂರಿನ 86 ಪಬ್‌, ಬಾರ್‌ ಗಳಿಗೆ ನೋಟಿಸ್​​, 12 ಬಂದ್

0

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಲಯವಾರು ಪಬ್‌, ಬಾರ್‌ ಮತ್ತು ರೆಸ್ಟೋರೆಂಟ್‌ ಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದು, 12 ಪಬ್‌, ಬಾರ್‌ ಗಳಿಗೆ ಬೀಗ ಜಡಿದಿದ್ದಾರೆ.

ರಾಜ್ಯ ರಾಜಧಾನಿಯಲ್ಲಿ ಅಗ್ನಿ ದುರಂತ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಅಲರ್ಟ್ ಆಗಿದ್ದು, ನಗರದಲ್ಲಿರುವ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪಾಲಿಕೆಯ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ‌ ನೇತೃತ್ವದಲ್ಲಿ ಇಂದು ತಪಾಸಣೆ ನಡೆಸಲಾಯಿತು. ನ್ಯೂನತೆಗಳು ಕಂಡುಬಂದಿರುವ ಉದ್ದಿಮೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಜತೆಗೆ ಪರವಾನಿಗೆ ನಿಯಮಾವಳಿ ಪಾಲಿಸದ ಉದ್ದಿಮೆಗಳನ್ನು ಸ್ಥಳದಲ್ಲೇ ಮುಚ್ಚಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,118 ಉದ್ದಿಮೆಗಳಿಗೆ ಪರವಾನಿಗೆ ನೀಡಲಾಗಿದ್ದು, ಈ ಪೈಕಿ‌ ಇಂದು 232 ಉದ್ದಿಮೆಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 86 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಿ, 12 ಉದ್ದಿಮೆಗಳನ್ನು ಮುಚ್ಚಲಾಗಿದೆ.

ನಿರ್ಲಕ್ಷ್ಯ ವಹಿಸಿರುವ ಪಬ್‌, ಬಾರ್‌ ಮತ್ತು ರೆಸ್ಟೋರೆಂಟ್​ಗಳ ವಿರುದ್ಧ ಕೈಗೊಂಡ ಕ್ರಮಗಳು ಏನು ಎಂಬುದರ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ, ಸಮರೋಪಾದಿಯಲ್ಲಿ ನಗರದಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಲಯ ಆರೋಗ್ಯಾಧಿ ಕಾರಿಗಳಿಗೆ ಏಳು ದಿನ ಸಮಯ ನೀಡಲಾಗಿದೆ, ಈ ಏಳು ದಿನದಲ್ಲಿ ತಮ್ಮ ವಲಯ ವ್ಯಾಪ್ತಿಯಲ್ಲಿ ಎಷ್ಟು ಪಬ್, ಬಾರ್ ಮತ್ತು ಸ್ಟೋರೆಂಟ್‌ ಗಳಿವೆ, ಎಷ್ಟು ಪಬ್, ಬಾರ್ ಮತ್ತು ರೆಸ್ಟೋರೆಂಟ್‌ ಗಳಲ್ಲಿ ಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಎಲ್ಲಿ ನ್ಯೂನ್ಯತೆಗಳಿವೆ. ಪಬ್, ಬಾರ್‌ ಮತ್ತು ರೆಸ್ಟೋರೆಂಟ್ ನಡೆಸುವುದಕ್ಕೆ ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಂದ ಪರವಾನಗಿ ಪಡೆಯಲಾಗಿದೆಯೇ? ಎಷ್ಟು ಕಡೆ ಅನಧಿಕೃತವಾಗಿ ಮತ್ತು ಕಾನೂನು ಉಲ್ಲಂಘಿಸಿ ನಡೆಸಲಾಗುತ್ತಿದೆ ಎಂದು ಪರಿಶೀಲಿಸಲು ಸೂಚಿಸಲಾಗಿದೆ.

ಹಿಂದಿನ ಲೇಖನಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್‌ ಕಾನ್‌ ಸ್ಟೇಬಲ್ ನಾಪತ್ತೆ
ಮುಂದಿನ ಲೇಖನಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ