ಮನೆ ಕಾನೂನು ಬಾಗಲಕೋಟೆ ವಕೀಲೆ ಸಂಗೀತಾ ಶಿಕ್ಕೇರಿಗೆ ರಾಜ್ಯ ವಕೀಲರ ಪರಿಷತ್​​ ನಿಂದ ನೋಟಿಸ್‌

ಬಾಗಲಕೋಟೆ ವಕೀಲೆ ಸಂಗೀತಾ ಶಿಕ್ಕೇರಿಗೆ ರಾಜ್ಯ ವಕೀಲರ ಪರಿಷತ್​​ ನಿಂದ ನೋಟಿಸ್‌

0

ಬೆಂಗಳೂರು(Bengaluru): ಸಾರ್ವಜನಿಕ ಪ್ರದೇಶದಲ್ಲಿ ಮಹಾಂತೇಶ ಚೊಳಚಗುಡ್ಡ ಎಂಬುವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಿಂದ ಹೊಡೆದಿದ್ದ ಘಟನೆ ಸಂಬಂಧ ವಿವರಣೆ ಕೇಳಿ ಬಾಗಲಕೋಟೆ ವಕೀಲೆ ಸಂಗೀತಾ ಶಿಕ್ಕೇರಿ ಅವರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ ನೋಟಿಸ್‌ ಜಾರಿ ಮಾಡಿದೆ.

ಕೆಎಸ್​​ಬಿಸಿ ಕಾರ್ಯದರ್ಶಿ ಪುಟ್ಟೇಗೌಡ ಮೇ 26ರಂದು ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 7 ದಿನಗಳಲ್ಲಿ ವಿವರಣೆ ನೀಡುವಂತೆ ಸೂಚಿಸಲಾಗಿದೆ. ವಕೀಲೆ ಸಂಗೀತಾ ಶಿಕ್ಕೇರಿ ಅವರಿಗೆ ಮಹಾಂತೇಶ ಚೊಳಚುಗುಡ್ಡ ಎಂಬ ವ್ಯಕ್ತಿ ಕಾಲಿನಿಂದ ಒದೆಯುವ ವಿಡಿಯೋ ಮೇ 14ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈ ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.ವಕೀಲೆಯೊಬ್ಬರ ಮೇಲೆ ನಡೆದ ಈ ದಾಳಿಯನ್ನು ರಾಜ್ಯದ ವಿವಿಧ ವಕೀಲರ ಸಂಘಗಳು ಹಾಗೂ ರಾಜ್ಯ ವಕೀಲರ ಪರಿಷತ್ ಹಾಗೂ ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದರು. ಆದರೆ ಒಂದೆರಡು ದಿನಗಳ ನಂತರ ವಕೀಲೆ ಸಂಗೀತಾ ಶಿಕ್ಕೇರಿ ಅವರು ಮಹಾಂತೇಶಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾಲಿನಿಂದ ಚಪ್ಪಲಿ ತೆಗೆದು ಹೊಡೆದ ವಿಡಿಯೋ ದೃಶ್ಯ ಬೆಳಕಿಗೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿರುವ ರಾಜ್ಯ ವಕೀಲರ ಪರಿಷತ್​​, ನಿಮ್ಮ ನಡವಳಿಕೆ ವಕೀಲರ ಕಾಯ್ದೆ–1961ಕ್ಕೆ ವಿರುದ್ಧವಾಗಿದೆ. ಇದು ವಕೀಲ ವೃತ್ತಿಯ ಘನತೆಗೆ ತಕ್ಕನಾದ್ದಲ್ಲ. ಹೀಗಾಗಿ, ಘಟನೆ ಕುರಿತಂತೆ ಹಾಗೂ ನಿಮ್ಮ ನಡವಳಿಕೆಗೆ ವಿವರಣೆ ನೀಡಬೇಕು ಎಂದು ತಿಳಿಸಿದೆ.