ನವದೆಹಲಿ: ಯೆಮನ್‌ನಲ್ಲಿ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತ ಮೂಲದ ನರ್ಸ್ ನಿಮಿಷ ಪ್ರಿಯಾ ಅವರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ನಿಮಿಷ ಪ್ರಿಯಾ ಅವರನ್ನು ರಕ್ಷಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ನಡೆಸಿದೆ. ಈ ವೇಳೆ ನಿಮಿಷಾ ಅವರ ಶಿಕ್ಷೆಯನ್ನು ಮುಂದೂಡಿರುವ ಬಗ್ಗೆ ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು.
ಕೇಂದ್ರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ನಿಮಿಷಾ ಅವರನ್ನು ಕರೆತರಲು ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ನಿಮಿಷ ಪ್ರಿಯಾ ಅವರು ಸುರಕ್ಷಿತವಾಗಿ ಭಾರತಕ್ಕೆ ವಾಪಸಾಗಬೇಕು ಎಂದು ಸರ್ಕಾರವೂ ಬಯಸುತ್ತದೆ. ಸಾಧ್ಯವಾದಷ್ಟು ಎಲ್ಲಾ ಪ್ರಯತ್ನಗಳನ್ನು ಸರ್ಕಾರ ಕೂಡಾ ಮಾಡುತ್ತಿದೆ ಎಂದು ಹೇಳಿದರು.
ಇನ್ನು ಅರ್ಜಿದಾರರ ಪರ ಹಾಜರಾದ ವಕೀಲರು ಮಾತನಾಡಿ, ಮೊದಲು ನಿಮಿಷ ಪ್ರಿಯಾ ಅವರಿಗೆ ಕ್ಷಮಾದಾನ ಸಿಗಬೇಕು. ನಂತರ ಬ್ಲಡ್ ಮನಿ ವಿಚಾರವಾಗಿ ಮಾತುಕತೆ ನಡೆಸಬಹುದು ಎಂದು ಹೇಳಿದ್ದಾರೆ. ಈ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 14 ಕ್ಕೆ ಮುಂದೂಡಿದೆ.
2017ರಲ್ಲಿ ಯೇಮನ್‌ನ ನಾಗರಿಕ ತಲಾಲ್ ಅಬ್ದೋ ಮಹ್ದಿ ಹತ್ಯೆ ಮಾಡಿದ ಆರೋಪದ ಮೇಲೆ ನರ್ಸ್ ಆಗಿದ್ದ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್‌ನ ನಿವಾಸಿ ನಿಮಿಷಾ ಅವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಈ ಮೊದಲು ಜುಲೈ 16 ಕ್ಕೆ ನಿಮಿಷಾ ಅವರಿಗೆ ಗಲ್ಲು ಶಿಕ್ಷೆ ನಿಗದಿಯಾಗಿದ್ದು, ನಂತರ ಅದನ್ನು ಮುಂದೂಡಲಾಗಿದೆ. ಸದ್ಯ ಅವರು ಯೆಮನ್ ರಾಜಧಾನಿ ಸನಾದಲ್ಲಿನ ಜೈಲಿನಲ್ಲಿದ್ದಾರೆ.














