ಮನೆ ಕಾನೂನು ನ್ಯಾ. ಬಿಂದಾಲ್, ನ್ಯಾ. ಅರವಿಂದ್ ಕುಮಾರ್ರನ್ನು ಸುಪ್ರೀಂ ನ್ಯಾಯಮೂರ್ತಿಗಳಾಗಿ ನೇಮಿಸಿ ಅಧಿಸೂಚನೆ ಪ್ರಕಟಿಸಿದ ಕೇಂದ್ರ

ನ್ಯಾ. ಬಿಂದಾಲ್, ನ್ಯಾ. ಅರವಿಂದ್ ಕುಮಾರ್ರನ್ನು ಸುಪ್ರೀಂ ನ್ಯಾಯಮೂರ್ತಿಗಳಾಗಿ ನೇಮಿಸಿ ಅಧಿಸೂಚನೆ ಪ್ರಕಟಿಸಿದ ಕೇಂದ್ರ

0

ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಅರವಿಂದ್ ಕುಮಾರ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಿಸಿ ಶುಕ್ರವಾರ ಕೇಂದ್ರ ಸರ್ಕಾರವು ಅಧಿಸೂಚನೆ ಪ್ರಕಟಿಸಿದೆ. ಸುಪ್ರೀಂ ಕೋರ್ಟ್ನಲ್ಲಿ 34 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಹಾಲಿ ನೇಮಕಾತಿಯೊಂದಿಗೆ ಸುಪ್ರೀಂ ಕೋರ್ಟ್ನಲ್ಲಿನ ಎಲ್ಲಾ ನ್ಯಾಯಮೂರ್ತಿಗಳ ಹುದ್ದೆಗಳು ಭರ್ತಿಯಾದಂತಾಗಿದೆ.

ಕರ್ನಾಟಕ ಮೂಲದ ನ್ಯಾ. ಅರವಿಂದ್ ಕುಮಾರ್ ಅವರನ್ನು 2021ರ ಅಕ್ಟೋಬರ್’ನಲ್ಲಿ ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಿ ಪದೋನ್ನತಿ ನೀಡಲಾಗಿತ್ತು.

“ಸಂವಿಧಾನದ ನಿಬಂಧನೆಗಳ ಅಡಿ ರಾಷ್ಟ್ರಪತಿ ಅವರು ಅಲಾಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನು ಸುಪ್ರೀಂ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿದ್ದಾರೆ” ಎಂದು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಟ್ವೀಟ್ ಮಾಡಿದ್ದಾರೆ.

ರಾಜೇಶ್ ಬಿಂದಾಲ್ ಅವರು ಸದ್ಯ ಅಲಾಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದು, ಅರವಿಂದ್ ಕುಮಾರ್ ಅವರು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಈ ಇಬ್ಬರ ಹೆಸರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಜನವರಿ 31ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

2006ರ ಮಾರ್ಚ್’ನಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದ ರಾಜೇಶ್ ಬಿಂದಾಲ್ ಅವರನ್ನು 2021ರ ಅಕ್ಟೋಬರ್ನಲ್ಲಿ ಅಲಾಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿತ್ತು. ಹಿರಿತನದ ಆಧಾರದಲ್ಲಿ ನೋಡುವುದಾದರೆ ದೇಶದ ಎಲ್ಲಾ ಹೈಕೋರ್ಟ್’ಗಳ ನ್ಯಾಯಮೂರ್ತಿಗಳ ಪೈಕಿ ಪೈಕಿ ನ್ಯಾ. ಬಿಂದಾಲ್ ಅವರು ಎರಡನೇ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೂಲದವರಾದ ನ್ಯಾ. ಬಿಂದಾಲ್ ಅವರ ಹೆಸರನ್ನು ಶಿಫಾರಸ್ಸು ಮಾಡುವಾಗ ದೇಶದ ದೊಡ್ಡ ಹೈಕೋರ್ಟ್’ಗಳಲ್ಲಿ ಒಂದಾದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್’ಗೆ ಸುಪ್ರೀಂ ಕೋರ್ಟ್’ನಲ್ಲಿ ಸೂಕ್ತ ಆದ್ಯತೆ ಸಿಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಹೇಳಿತ್ತು. 2009ರ ಜೂನ್ನಲ್ಲಿ ಅರವಿಂದ್ ಕುಮಾರ್ ಅವರನ್ನು ಕರ್ನಾಟಕ ಹೈಕೋರ್ಟ್’ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿದ್ದು, 2012ರ ಡಿಸೆಂಬರ್’ನಲ್ಲಿ ಕಾಯಂಗೊಳಿಸಲಾಗಿತ್ತು. 2021ರ ಅಕ್ಟೋಬರ್’ನಲ್ಲಿ ನ್ಯಾ. ಅರವಿಂದ್ ಕುಮಾರ್ ಅವರನ್ನು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿಸಿ ಪದೋನ್ನತಿ ನೀಡಲಾಗಿತ್ತು.

ಅಖಿಲ ಭಾರತ ಮಟ್ಟದ ಹಿರಿತನದಲ್ಲಿ ಎಲ್ಲಾ ಹೈಕೋರ್ಟ್’ಗಳಲ್ಲಿನ ನ್ಯಾಯಮೂರ್ತಿಗಳನ್ನು ಪರಿಗಣಿಸುವುದಾದರೆ ನ್ಯಾ. ಅರವಿಂದ್ ಕುಮಾರ್ ಅವರು 26ನೇ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. ಕರ್ನಾಟಕ ಹೈಕೋರ್ಟ್’ನಿಂದ ಬಂದಿರುವ ಎರಡನೇ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಾಗಿದ್ದಾರೆ.