ನಟರಾದ ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್ ಮತ್ತು ಸಂಚಿತಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ತ್ರಿಕೋನ ಕಥಾಹಂದರದ “ಓ ಮನಸೇ’ ಸಿನಿಮಾ ಇದೇ ಜುಲೈ 14 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸದ್ಯ “ಓ ಮನಸೇ’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಕೊನೆಹಂತದ ಕಸರತ್ತು ನಡೆಸುತ್ತಿದೆ.
ಮೊದಲಿಗೆ ಸಿನಿಮಾದ ಬಗ್ಗೆ ಮಾತನಾಡಿದ ನಟ ವಿಜಯ ರಾಘವೇಂದ್ರ, “ಈ ಸಿನಿಮಾದಲ್ಲಿ ಶಿಕ್ಷಣಕ್ಕೆ ಮಹತ್ವ ಕೊಡುವ ಒಂದಷ್ಟು ವಿಷಯಗಳಿವೆ. ಹಾಗಾಗಿ ನಾನು ಈ ಸಿನಿಮಾವನ್ನು ಒಪ್ಪಿಕೊಂಡೆ. ಉಳಿದಂತೆ ಲವ್, ಸಸ್ಪೆನ್ಸ್, ಕಾಮಿಡಿ ಹೀಗೆ ಎಲ್ಲ ಎಂಟರ್‌ಟೈನ್ಮೆಂಟ್ ಅಂಶಗಳೂ ಸಿನಿಮಾದಲ್ಲಿದೆ. ಈ ಸಿನಿಮಾದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದೇನೆ’ ಎಂದು ತಮ್ಮ ಪರಿಚಯ ಮಾಡಿಕೊಟ್ಟರು.
“ಶ್ರೀ ಫ್ರೆಂಡ್ಸ್ ಮೂವೀ ಮೇಕರ್’ ಲಾಂಛನದಲ್ಲಿ ಎಂ. ಎನ್ ಭೈರೇಗೌಡ, ಧನಂಜಯ್ ಯುವರಾಜು, ಸು. ಕಾ. ರಾಮು ಮತ್ತು ವೆಂಕಟೇಶ್ ಜಂಟಿಯಾಗಿ ನಿರ್ಮಿಸಿರುವ “ಓ ಮನಸೇ’ ಸಿನಿಮಾಕ್ಕೆ ಉಮೇಶ್ ಗೌಡ ನಿರ್ದೇಶನವಿದೆ.
“ಓ ಮನಸೇ’ ಸಿನಿಮಾದಲ್ಲಿ ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ ಅವರೊಂದಿಗೆ ಹನುಮಂತೇಗೌಡ, ಶೋಭರಾಜ್, ಸಾಧು ಕೋಕಿಲ, ಗೋವಿಂದೇ ಗೌಡ, ಹರೀಶ್ ರಾಯ್ ಚಿಕ್ಕಹೆಜ್ಜಾಜಿ ಮಹಾದೇವ್, ಕಿಲ್ಲರ್ ವೆಂಕಟೇಶ್, ವಾಣಿಶ್ರೀ, ಜಯರಾಮ್, ರುಶಿಕಾ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಬೆಂಗಳೂರು, ಮಡಿಕೇರಿ, ಬ್ಯಾಂಕಾಕ್, ತಲ ಕಾವೇರಿ, ಪಟ್ಟಾಯಾ ಸುತ್ತಮುತ್ತ ಸುಮಾರು 55ಕ್ಕೂ ಹೆಚ್ಚು ದಿನಗಳ ಕಾಲ “ಓ ಮನಸೇ’ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. “ಓ ಮನಸೇ’ ಸಿನಿಮಾಕ್ಕೆ ಎಂ. ಆರ್ ಸೀನು ಛಾಯಾಗ್ರಹಣ, ಶ್ರೀನಿವಾಸ್ ಪಿ. ಬಾಬು ಸಂಕಲನವಿದೆ. ಚಿತ್ರದ ಹಾಡುಗಳಿಗೆ ಜೆಸ್ಸಿಗಿಫ್ಟ್ ಸಂಗೀತ ಸಂಯೋಜಿಸಿದ್ದು, ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ಅಂದಹಾಗೆ, ಸುಮಾರು 120ಕ್ಕೂ ಹೆಚ್ಚಿನ ಥಿಯೇಟರ್ ಗಳಲ್ಲಿ “ಓ ಮನಸೇ’ ಸಿನಿಮಾ ಬಿಡುಗಡೆಯಾಗಲಿದೆ.