ಮನೆ ಆರೋಗ್ಯ ಮಹಿಳೆಯರಲ್ಲಿ ಬೊಜ್ಜು

ಮಹಿಳೆಯರಲ್ಲಿ ಬೊಜ್ಜು

0

ಭಾನುವಾರ ರಜೆ ದಿನ, ಬೆಳಗ್ಗೆ ಗಂಟೆ ಸುಮಾರು 9.30 . ಇವತ್ತು ಓ,ಪಿ, ಡಿ ನಲ್ಲಿ ಭಾನುವಾರವಾದ ಕಾರಣ ಪೇಶಂಟ್ ಬರ್ತಾರಾ ಇಲ್ವೋ ಅನ್ನೋ ಸಂಶಯದಲ್ಲಿ ಎಂದಿನಂತೆ ಮನೆಕೆಲಸ ಮುಗಿಸಿ ನಾನು ಕ್ಲಿನಿಕ್ ಹೋದ.ಅಷ್ಟು ಹೊತ್ತಲ್ಲಿ ತನ್ನ ದೇಹ ತನಗೇ ಭಾರವೆಂಬಂತೆ ನಡೆಯಲು ಕಷ್ಟವಾಗಿ, ದೊಡ್ಡದಾದ ಮೈಕಟ್ಟು ಹೊಂದಿರುವ ಮಹಿಳೆಯೊಬ್ಬಳು ಬಂದಳು. ಅವಳು ಬಂದು ನಿಟ್ಟುಸಿರು ಬಿಡುತ್ತಾ, ನನ್ನ ತೂಕ ಕಡಿಮೆ ಮಾಡಿ ಡಾಕ್ಟ್ರೇ ಎಂದಳು. ತನಗಿರುವ ಸಮಸ್ಯೆ ಏನೆಂದು ನಾನು ಕೇಳುವ ಮೊದಲೇ ತನ್ನ ವೇದನೆಯನ್ನು ತೋಡಿಕೊಂಡಳು.

ಯಾವಾಗಿನಿಂದ ನೀವು ದಪ್ಪಗಾದಿರಿ ಎಂದು ಕೇಳಿದೆ

 ಮಹಿಳೆ – ಡಾಕ್ಟ್ರೇ ಈಗ ನನ್ನ ವಯಸ್ಸು 40 ವರ್ಷ, ಮದುವೆ ಮುಂಚೆ ಬಳಕುವ ಬಳ್ಳಿ ತರ ಇದ್ದೆ ಆದ್ರೆ ಈಗ ಕುಂಬಳಕಾಯಿ ಆಗಿದಿನಿ, ನನ್ನ ನೋಡಿ ಎಲ್ರೂ ಹೀಯಾಳಿಸುತ್ತಾ ಇದ್ದಾರೆ, ಅವರ ನಿಂದನೆ ಬಿಡಿ, ನನ್ನ ದೇಹ ನನಗೆ ಭಾರ ಅನ್ನಿಸ್ತಿದೆ, ಮಂಡಿ ನೋವು ಇದೆ, ಮುಟ್ಟು ಕೂಡ ಸರಿಯಾಗಿ ಆಗ್ತಿಲ್ಲ, ಕೆಲಸ ಮಾಡಲು ಆಸಕ್ತಿ ಇಲ್ಲ, ಬೇಗನೆ ಸುಸ್ತು ಆಗ್ತಿದೆ,ನಿದ್ದೆ ಜಾಸ್ತಿ, ಹಗಲೊತ್ತಿನಲ್ಲೂ ಮಲಗಬೇಕು ಅನ್ಸುತ್ತೆ, ಎಷ್ಟು ತಿಂದ್ರೂ ಬೇಗನೆ ಹಸಿವಾಗತ್ತೆ ಒಮ್ಮೊಮ್ಮೆ ಹಸಿವೇ ಆಗೋಲ್ಲ, ಇದೆಲ್ಲ ನೋಡ್ತಾ ಇದ್ರೆ ನಂಗೆ ಭಯ ಆಗ್ತಿದೆ! ಇದು ನನ್ನ ಸಮಸ್ಯೆ ಅಷ್ಟೇ ಅಲ್ಲ ನನ್ನ ಸ್ನೇಹಿತೆಯೊಬ್ಬಳು ದಪ್ಪ ಇದ್ದಾಳೆ, ಅವಳಿಗೆ ಡಾಕ್ಟರ್ ನೀವು ಹೀಗೆ ಇದ್ರೆ ಮಕ್ಕಳಾಗೋದು ಕಷ್ಟ ಅಂತ ಹೇಳಿದ್ದಾರೆ, ಇದಕ್ಕೆಲ್ಲ ಕಾರಣ ಏನು?

ಡಾಕ್ಟರ್ – ನೀವು ಇಷ್ಟೆಲ್ಲಾ ತೊಂದರೆಯಿಂದ ಬಳಲುತ್ತಿರವುದಕ್ಕೆ ನಿಮ್ಮ ತೂಕವೇ ಕಾರಣ, ಮನುಷ್ಯನು ತನ್ನ ಎತ್ತರ ಹಾಗೂ ವಯಸ್ಸಿಗೆ ಅನುಗುಣವಾಗಿ ತೂಕ ಹೊಂದಿರಬೇಕು. ಆ ತೂಕ ಹೆಚ್ಚಾದರೆ ಅದಕ್ಕೆ ಬೊಜ್ಜು ಅಂತ ಕರೀತಿವಿ. ಬೊಜ್ಜು ಅನಗತ್ಯವಾದದ್ದು ಅದು ಇದ್ದಷ್ಟು ತೊಂದರೆ ಜಾಸ್ತಿ , ಅದು ಹಲವಾರು ಆರೋಗ್ಯ ಸಮಸ್ಯೆಗಳಿಗಅವಕಾಶಮಾಡಿಕೊಡುತ್ತದೆ.ನಿಮ್ಮಲ್ಲೂ ಇದೇ ಆಗಿರೋದು, ನಿಮ್ಮ ಬೊಜ್ಜುತನ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತಿದೆ. ಮುಂಚೆ ನಿಮಗೆ ಬೊಜ್ಜಿನ ತೊಂದರೆ ಇತ್ತು ,ಈಗ ಅದು ಬೇರೆ ತೊಂದರೆಗಳಿಗೆ ದಾರಿಮಾಡಿಕೊಡುತ್ತಿದೆ.

ಐ ,ಸಿ ,ಎಂ ,ಆರ್ ನ ಆದೇಶಗಳ ಪ್ರಕಾರ ಗಂಡಸರಿಗಿಂತ ಹೆಂಗಸರಲ್ಲಿ ಮೆಟಬೋಲಿಸಂ ಕಡಿಮೆ ಎಂದು ಅಧ್ಯಯನಗಳು ಹೇಳಿವೆ, ಜೊತೆಗೆ ಹೆಂಗಸರಲ್ಲಿ ಹಾರ್ಮೋನುಗಳ ಬದಲಾವಣೆಗಳು ಅವರು ಪ್ರೌಢಾವಸ್ಥೆಗೆ ಕಾಲಿಟ್ಟಾಗಿನಿಂದ ಅವರ ವೃಧ್ಧಾಪ್ಯದವರೆಗೂ ಇರುತ್ತದೆ.

,ಸಹಜವಾಗಿ ನಿಮ್ಮ ದೇಹದಲ್ಲಾಗುವ ಬದಲಾವಣೆಗಳಿಂದ ನಿಮ್ಮ ತೂಕದಲ್ಲಿ ಏರುಪೇರಾಗುತ್ತದೆ ,ಅದರ ಜೊತೆ ನೀವೂ ಕೂಡ ಇದಕ್ಕೆ ಕಾರಣ.

ಐಶಾರಾಮಿ ಜೀವನಶೈಲಿ ನಡೆಸುತ್ತಿರುವ ಹೆಂಗಸರು, ತಮ್ಮ ಮನೆಯ ಕೆಲಸಕಾರ್ಯ ಮಾಡಲೆಂದು ಕೆಲಸಗಾರರನ್ನು ಇಟ್ಟುಕೊಂಡಿರುತ್ತಾರೆ, ಇದರಿಂದಾಗಿ ಅವರು ದೈಹಿಕವಾಗಿ ಶ್ರಮಿಸುವುದಿಲ್ಲ, ಕೂತಲ್ಲೇ ಕೂತು ಆನಂದಿಸುತ್ತಾರೆ, ಇದರ ಪರಿಣಾಮ ಅವರಿಗೆ ಬೊಜ್ಜು ಬರುತ್ತದೆ. ಇದು ಇವರ ಜೀವನ.

ಇನ್ನೊಂದೆಡೆ ಮಹಿಳೆಯರು ದಿನದ 24 ಗಂಟೆ ತನ್ನ ಸಂಸಾರದ ಕಾಳಜಿವಹಿಸಿಸುವುದರಲ್ಲಿ ಅವರ ಜೀವನ ಕಳೆಯುತ್ತಾರೆ. ಮನೆ ಹೊರಗಡೆ, ಹಾಗು ಕಂಪನಿಗಳಲ್ಲಿ ಕೆಲಸಮಾಡುವ ಹೆಣ್ಣುಮಕ್ಕಳು ಸಹ ಅವರ ಆರೋಗ್ಯದ ಕಡೆ ಗಮನ ಕೊಡುವುದಿಲ್ಲ, ಆಫೀಸಿನಿಂದ ಮನೆ, ಮನೆಯಿಂದ, ಆಫೀಸ್, ಇಷ್ಟೇ ಇವರ ಜೀವನ.

ನಿಮ್ಮದು ಕೂಡ ಇವುಗಳಲ್ಲಿ ಒಂದಾಗಿದೆ ,,

ಬೊಜ್ಜಿಗೆ ಕಾರಣ, ಅದರ ಲಕ್ಷಣ ಹಾಗೂ ಅದರಿಂದಾಗುವ ಅಪಾಯಗಳನ್ನು ಅವರಿಗೆ ತಿಳಿಸಿಕೊಟ್ಟೆ.

ಮಹಿಳೆ – ಇದಕ್ಕೆ ಪರಿಹಾರ ? ಎಂದು ಆಕೆ ಕೇಳಿದಳು

(ಪರಿಹಾರದ ಬಗ್ಗೆ ನಂತರ ವಿವರಿಸುತ್ತೇನೆ.)

ಪರಿಹಾರವನ್ನು ಕೇಳಿದ ನಂತರ ಆಕೆ ಹೊರಟುಹೋದಳು .

ಹೋದ ನಂತರ ನನಗೆ ಹೆಣ್ಣಿನ ಜೀವನದ ಮೇಲೆ ಅನುಕಂಪವಾಯಿತು, ಸದಾ ತನ್ನ ಸಂಸಾರದ ಒಳಿತಿಗೆ ಚಿಂತಿಸುತ್ತಾಳೆ, ತನ್ನ ಕಡೆ ಗಮನ ಕೊಡುವುದೇ ಇಲ್ಲ.

ನಿಜಕ್ಕೂ ಅವಳು ಕರುಣಾಮಯಿ ..

ಪೋಷಕರೇ ನಿಮ್ಮ ಮಕ್ಕಳ ಆರೋಗ್ಯಕ್ಕೆ ನೀವೇ ಜವಾಬ್ದಾರರು 

ನಾನು ಬಹಳ ದಿನಗಳ ನಂತರ ನನ್ನ ಸ್ನೇಹಿತನ ಮನೆಗೆ ಹೋಗಿದ್ದೆ , ಅವನ 10 ವರ್ಷದ ವಯಸ್ಸಿನ ಮಗಳೊಬ್ಬಳು ಮೊಬೈಲ್ ಹಿಡಿದು ಕೂತಿದ್ದಳು , ಆಗ ಅವಳನ್ನು ನೋಡಿ ಇವನು  ಎಂತಾ ಕಾಲ ಬಂತು, ನಮ್ಮ ಕಾಲದಲ್ಲಿ ನಾವು ಮರಕೋತಿ ಆಡ್ತಾ ಇದ್ವಿ, ಸೈಕಲ್ ಓಡಿಸ್ತಿದ್ವಿ ,ಕುಂಟೆಬಿಲ್ಲೆ, ಕಣ್ಣುಮುಚ್ಚಾಲೆ, ಇದನೆಲ್ಲಾ ಆಡ್ತಾ ಇದ್ವಿ ,ದಿನದ ಅರ್ಧಹೊತ್ತು ಆಂಗಣದಲ್ಲೇ ಇರ್ತಿದ್ವಿ, ಬಿಸಿಲು ಮಳೆ ನೋಡದೆ ಆಡ್ತಾ ಇದ್ವಿ, ಆದ್ರೆ ಈಗಿನ ಮಕ್ಕಳು ಇಡೀ ದಿನ ಟಿವಿ/ಮೊಬೈಲ್/ ವಿಡಿಯೋಗಮ್ ಆತ ಕೂತಿರ್ತಾರೆ, ಇವರಿಗೆ ಎಷ್ಟು ಬುದ್ಧಿ ಹೇಳಿದ್ರು ಅರ್ಥನೇ ಆಗಲ್ಲ ಅಂತ ಬೈತಾ ಇದ್ದ. ಇದು ಇವರ ಮನೆಯ ಕಥೆಯಾದರೆ .ಇನ್ನೊಂದೆಡೆ ಮಕ್ಕಳು ತಿನ್ನಲು ಹಠ ಮಾಡಿದರೆ ಸ್ವಯಂ ಅಪ್ಪ ಅಮ್ಮಂದಿರೆ ಮಕ್ಕಳಿಗೆ ಜುಂಕ್ಫುಡ್ ರುಚಿ ಹತ್ತಿಸುತ್ತಾರೆ, ಅವರಿಗೆ ಒಟ್ನಲ್ಲಿ ಮಕ್ಕಳ ಹೊಟ್ಟೆ ತುಂಬಿದ್ರೆ ಸಾಕು, ಆದರೆ ಹೊಟ್ಟೆಗೆ ಹೋಗುತ್ತಿರುವ ಆಹಾರದ ಗುಣಮಟ್ಟದ ಕಡೆ ಗಮನವಿಲ್ಲ.ಈ ಎರಡೂ ಸಂಗತಿಗಳಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಪೋಷಕರಿಗೆ ತಮ್ಮ ಮಕ್ಕಳ ಮೇಲಿರುವ ಅಪಾರವಾದ ಪ್ರೀತಿ, ಇಷ್ಟು ಮುದ್ದಾಗಿ ಬೆಳೆಸಿರುವ ಮಕ್ಕಳು ಆರೋಗ್ಯ ಹಾಳುಮಾಡಿಕೊಂಡಾಗ ತಲೆ ಮೇಲೆ ಬೆಟ್ಟವೇ ಬಿದ್ದಂತೆ ಓಡೋಡಿ ಆಸ್ಪತ್ರೆಗೆ ಬರುತ್ತಾರೆ,ಇಂತಹ ಆರೋಗ್ಯ ಸಮಸ್ಯೆಗಳಲ್ಲಿ ಬೊಜ್ಜು ಕೂಡ ಒಂದಾಗಿದೆ.

ಮಕ್ಕಳು ಸಣ್ವವರಾಗಿದ್ದಾಗ ಗುಂಗುಂಡಾಗಿ ಇರಬೇಕೆಂದು ಬಯಸುವ ಪೋಷಕರು , ಅದೇ ಗುಂಡುತನ ದಿನ ಕಳೆದಂತೆ ಹೆಚ್ಚಾಗಿ ಬೊಜ್ಜಿಗೆ ಪರಿವರ್ತನೆಗೊಳ್ಳುತ್ತಿದ್ದಂತೆ ಚಿಂತೆಗೀಡಾಗುತ್ತಾರೆ . ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ವಾಕ್ಯ ನೀವು ಕೇಳಿರಲೇ ಬೇಕು.ಮಕ್ಕಳು ಪುಸ್ತಕದ ಖಾಲಿ ಹಾಳೆ ಇದ್ದಂತೆ , ಸಣ್ಣದ್ದಾಗಿನಿಂದಲೇ ಅವರಿಗೆ ಆರೋಗ್ಯಕರ ಜೀವನಶೈಲಿ ಹಾಗೂ ಶಿಸ್ತುಬದ್ಧ ಜೀವನ ಹೇಳಿಕೊಡಬೇಕು , ಆಗ ಅವರು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಅವರು ಸಣ್ಣವರಾಗಿದ್ದಾಗ ಎಲ್ಲ ಕುರುಕಲು ತಿನ್ನಲು ರುಚಿ ಹತ್ತಿಸಿ, ಊಟ ಮಾಡದೆ ಇದ್ದಾಗ ಕಥೆಹೇಳಿ ಊಟ ಮಾಡಿಸುವ ಬದಲು ಮೊಬೈಲ್ ತೋರಿಸಿ ತಿನ್ನಿಸಿ, ಈಗ ಅವರು ದೊಡ್ಡವರಾದ ಮೇಲೆ  ಮಾಡುವುದು ತಪ್ಪು ಎಂದು ಹೇಳುವುದು ಸರಿಯಲ್ಲ.

ಇದೆಲ್ಲವನ್ನು ಮಾಡಲು ಮೊದಲು ಪೋಷಕರು, ತಮ್ಮ ಮಕ್ಕಳಿಗಾಗಿ ಸಮಯವನ್ನು ಇಡಬೇಕು, ಆದರೆ ಈಗಿನ ಸಮಯದಲ್ಲಿ ಪೋಷಕರಿಗೆ ಸಮಯವೇ ಇಲ್ಲ , ಬೆಳಗ್ಗೆ ಮನೆ ಬಿಟ್ಟರೆ ಬರುವುದು ಸಂಜೆ, ಅದರ ನಂತರ ಸ್ವಲ್ಪ ಸಿಗುವ ಸಮಯದಲ್ಲಿ ಮನೆಕೆಲಸ ಮಾಡುತ್ತಾರೆ ,ಇದು ಗಂಭೀರವಾಗಿ ಯೋಚಿಸಬೇಕಾದ ವಿಷಯ.

ಪೋಷಕರೇ ನಿಮ್ಮ ಮಕ್ಕಳ ಬಾಲ್ಯವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿ, ಏನೂ ತಿಳಿಯದ ಮುಗ್ದ ಜೀವಕ್ಕೆ ಪ್ರೀತಿ ತೋರಿ ಅವರಿಗೆ ಆರೋಗ್ಯಕರ ಜೀವನ ರೂಪಿಸುವಲ್ಲಿ ಸಹಾಯಮಾಡಿ.

ಪರಿಹಾರ

ಯಾವುದೇ ಸಮಸ್ಯೆಯಿರಲಿ ಅದಕ್ಕೆ ಪರಿಹಾರ ಇದ್ದೆ ಇರುತ್ತದೆ . ಆದರೆ ಅದನ್ನು ತಿಳಿದುಕೊಳ್ಳದೆ ಮನುಷ್ಯ ವ್ಯಾಕುಲತೆಗೆ ಒಳಗಾಗುತ್ತಾನೆ .

ಎಲ್ಲಕಿಂತ ಮೊದಲಯಾಗಿ ಯಾವುದೇ ಸಮಸ್ಯೆ ಬಂದರು ಅದನ್ನ ಎದುರಿಸಲು ಮಾನಸಿಕಸ್ಥೈರ್ಯ ತುಂಬಾ ಮುಖ್ಯ . ಏಕೆಂದರೆ ಮನಸಿದ್ದರೆ ಮಾತ್ರ ಮಾರ್ಗ ದೊರೆಯುತ್ತದೆ. ಬೊಜ್ಜಿನ ಸಮಸ್ಯೆಗೆ ಕೂಡ ತುಂಬಾ ಅವಶ್ಯಕವಾಗಿ ಬೇಕಾಗಿರುವುದು ಆತ್ಮವಿಶ್ವಾಸ ಹಾಗೂ ಸ್ಥೈರ್ಯ.

ಸ್ಥೂಲಕಾಯತೆಯು ಇತರ ರೋಗಗಳಿಗೆ ಮೂಲಾಧಾರವಾಗಿದೆ, ಹಾಗಾಗಿ ಇದರಿಂದ ಮುಕ್ತಿಹೊಂದಬೇಕು. ಆರೋಗ್ಯಕರ ಜೀವನಶೈಲಿಯನ್ನು ನಿಮ್ಮದಾಗಿಸಿಕೊಂಡರೆ ಈ ಸಮಸ್ಯೆಯಿಂದ ದೂರವಾಗಬಹುದು, ಕೆಲವೊಂದು ಸಲಹೆಗಳು ಇಲ್ಲಿವೆ .

 ಪೌಷ್ಟಿಕ ಆಹಾರ ಸೇವಿಸಿ ,ನೀವು ಸೇವಿಸುವ ಆಹಾರದ ಕ್ಯಾಲರಿಯ ಬಗ್ಗೆ ಅರಿತುಕೊಳ್ಳಿ, ಸಾಧ್ಯವಾದರೆ ಡಯಟೀಷಿಯನ್ ಸಲಹೆ ತೆಗೆದುಕೊಳ್ಳಿ

 ವ್ಯಾಯಾಮ ,ಯೋಗದಂತಹ ದೈಹಿಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಿ

 ಪ್ರತಿದಿನ ನಿರ್ಧಿಷ್ಟ ಸಮಯದ ವರೆಗೆ ತಪ್ಪದೇ ನಿದ್ರಿಸಿ

 ದಿನನಿತ್ಯ ಲವಲವಿಕೆಯೊಂದಿಗೆ ಕೆಲಸಮಾಡಿ

 ಮನಸ್ಸನ್ನು ಖುಷಿಯಾಗಿಟ್ಟುಕೊಳ್ಳಿ

 ಬೇರೆ ಯಾವುದಾದರೂ ಆರೋಗ್ಯದ ಸಮಸ್ಯೆ ಪರಿಣಾಮವಾಗಿ ಸ್ಥೂಲಕಾಯ ಬಂದಿದ್ದರೆ , ಮೊದಲಿಗೆ ವೈದ್ಯರನ್ನು ಭೇಟಿ ಮಾಡಿ ಅವರು ಸೂಚಿಸುವ ರೀತಿಯಲ್ಲಿ ಚಿಕಿತ್ಸೆ ಪಡೆಯಿರಿ.v

 ಯೋಗದ ಜೊತೆಯಲ್ಲಿ ಪ್ರಾಣಾಯಾಮ ,ಧ್ಯಾನ ಮಾಡಿ ಇದರಿಂದ ಮಾನಸಿಕ ಒತ್ತಡವನ್ನು ನಿಯಂತ್ರಿಸಬಹುದು.

ನಿಮಗಿದು ತಿಳಿದಿರಲಿ

 ನಿಮ್ಮ ತೂಕದಿಂದ ನಿಂದನೆಗಳನ್ನು ಅನುಭವಿಸಿದ್ದರೆ ಅದನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಿ.

 ಅಡಚಣೆಗಳು ಹಲವಾರು ಬರುತ್ತದೆ ಹಾಗೆಂದು ನಿಮ್ಮ ಗುರಿಯಿಂದ ದಾರಿತಪ್ಪಬೇಡಿ.Ø

 ತಾಳ್ಮೆ ಇದ್ದರೆ ಫಲ ಹೆಚ್ಚು ಹಾಗಾಗಿ ತಾಳ್ಮೆಯೊಂದಿಗೆ ನಿಮ್ಮ ತೂಕ ಇಳಿಸುವ ಪಯಣವನ್ನು ಆರಂಭಿಸಿ

 ನಕಾರಾತ್ಮಕ ಯೋಚನೆಗಳನ್ನು ಬಿಡಿ

 ಮೊದಲಿನಲ್ಲೆಯೇ ಶಿಖರದ ತುದಿಗೆ ತಲುಪುವ ಪ್ರಯತ್ನ ಬೇಡ, ಮೊದಲಿಗೆ ಶಿಖರ ಹತ್ತುವ ಪ್ರಯಾಣವನ್ನು ಆರಂಭಿಸಿ.

 ಪಯಣ ಎಷ್ಟೇ ಕಹಿಯಾಗಿದ್ದರೂ ಸಿಗುವ ಫಲ ಸಿಹಿಯಾಗಿರುತ್ತದೆ.

ಲೇಖಕರು: ಅನುಷಾ ರಾಯ್ಕರ್,
ವೈದ್ಯರು,
ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಮೈಸೂರು