ಮನೆ ಕಾನೂನು ಜೇಷ್ಠತಾ ಪಟ್ಟಿ ತಯಾರಿಕೆ ವಿಳಂಬಕ್ಕೆ ಆಕ್ಷೇಪ: ರಾಜ್ಯ ಸರ್ಕಾರ, ಬಿಬಿಎಂಪಿಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಜೇಷ್ಠತಾ ಪಟ್ಟಿ ತಯಾರಿಕೆ ವಿಳಂಬಕ್ಕೆ ಆಕ್ಷೇಪ: ರಾಜ್ಯ ಸರ್ಕಾರ, ಬಿಬಿಎಂಪಿಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

0

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಡಿ ಗ್ರೂಪ್ ನೌಕರರ ಬಡ್ತಿಗೆ ಸಂಬಂಧಿಸಿದಂತೆ ಜೇಷ್ಠತಾ ಪಟ್ಟಿ ತಯಾರಿಸುವುದಕ್ಕೆ ವಿಳಂಬ ಮಾಡುತ್ತಿರುವುದನ್ನು ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.

Join Our Whatsapp Group

ಬೆಂಗಳೂರಿನ ಪಿ ಸುದರ್ಶನ್ ಸೇರಿದಂತೆ ಬಿಬಿಎಂಪಿಯ ವಿವಿಧ ವಲಯಗಳಲ್ಲಿ ಕರ ನಿರೀಕ್ಷಕರು, ಕಂದಾಯ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ 58 ಮಂದಿ ನೌಕರರು ಸಲ್ಲಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್ ನಟರಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಾದ ಆಲಿಸಿದ ಪೀಠವು ರಾಜ್ಯ ಸರ್ಕಾರ, ಬಿಬಿಎಂಪಿ ಮುಖ್ಯ ಆಯುಕ್ತ, ವಿಶೇಷ ಆಯುಕ್ತ (ಆಡಳಿತ) ಉಪ ಆಯುಕ್ತ (ಆಡಳಿತ) ಇವರಿಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೇ ಪಾಲಿಕೆಯು ಕಂದಾಯ ನಿರೀಕ್ಷಕರು, ಎಫ್‌ಡಿಎ ಹಾಗೂ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಬಡ್ತಿ ನೀಡಿ ಕೈಗೊಳ್ಳುವ ನಿರ್ಧಾರ ಅರ್ಜಿಯ ಅಂತಿಮ ಆದೇಶಕ್ಕೆ ಒಳಪಡಲಿದೆ ಎಂದು ಸ್ಪಷ್ಟಪಡಿಸಿದೆ.

ಅರ್ಜಿದಾರರು ಬಿಬಿಎಂಪಿಗೆ ಸಿ ಮತ್ತು ಡಿ ಗ್ರೂಪ್ ನೌಕರರಾಗಿ ದಿನಗೂಲಿ ಆಧಾರದ ಮೇಲೆ 2011ರಲ್ಲಿ ಸೇವೆಗೆ ಸೇರಿಕೊಂಡರು. 2011ರಿಂದ 2023ರವರೆಗೆ ವಿವಿಧ ವರ್ಷಗಳಲ್ಲಿ 700ಕ್ಕೂ ಅಧಿಕ ನೌಕರರ ಸೇವೆಯನ್ನು ಖಾಯಂಗೊಳಿಸಲಾಗಿದೆ. ಈ ನೌಕರರಿಗೆ ಬಡ್ತಿ ನೀಡಲು 2021ರಲ್ಲಿ ಸಿದ್ದಪಡಿಸಿದ್ದ ಜೇಷ್ಠತಾ ಪಟ್ಟಿಗೆ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಪರಿಷ್ಕೃತ ಜೇಷ್ಠತಾ ಪಟ್ಟಿ ಸಿದ್ದಪಡಿಸುವಂತೆ 2023ರ ಸೆಪ್ಟೆಂಬರ್‌ 5ರಂದು ಹೈಕೋರ್ಟ್ ಆದೇಶಿಸಿತ್ತು. ಈ ನಿಟ್ಟಿನಲ್ಲಿ ಅರ್ಜಿದಾರರು 2023ರ ಸೆಪ್ಟೆಂಬರ್‌ 29ರಿಂದ 2024ರ ಜುಲೈ 31ರವರೆಗೆ ಹಲವು ಬಾರಿ ಮನವಿ ನೀಡಿದ್ದರೂ ಜೇಷ್ಠತಾ ಪಟ್ಟಿ ಪ್ರಕಟಿಸಲಾಗಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅರ್ಜಿದಾರರು ಅವರ ಸೇವೆ ಕಾಯಂ ಆದ ಅವಧಿಯಿಂದ ಡಿ ಗ್ರೂಪ್‌ನಿಂದ ತೆರಿಗೆ ನಿರೀಕ್ಷಕ, ತೆರಿಗೆ ನಿರೀಕ್ಷಕನಿಂದ ಕಂದಾಯ ನಿರೀಕ್ಷಕ, ಕಂದಾಯ ನಿರೀಕ್ಷಕನಿಂದ ಕಂದಾಯ ಮೌಲ್ಯಮಾಪಕ, ಕಂದಾಯ ಮೌಲ್ಯಮಾಪಕನಿಂದ ಸಹಾಯಕ ಕಂದಾಯ ಅಧಿಕಾರಿಯಾಗಿ ಒಟ್ಟು ನಾಲ್ಕು ಬಡ್ತಿ ಹೊಂದಲು ಅವಕಾಶವಿದೆ. ಆದರೆ, ಪಾಲಿಕೆ ಮುಖ್ಯ ಆಯುಕ್ತರು ಹಾಗೂ ವಿಶೇಷ ಆಯುಕ್ತರು (ಆಡಳಿತ) ತಮ್ಮ ಆಸೆ ಮತ್ತು ಕಲ್ಪನೆಗಳಿಗೆ ತಕ್ಕಂತೆ ಆಯ್ದ ಕೆಲವರಿಗೆ ಬಡ್ತಿ ನೀಡುತ್ತಿದ್ದಾರೆ.

ಅಲ್ಲದೆ, ಬಡ್ತಿಗೆ ಅರ್ಹತೆ ಇಲ್ಲದವರು, ಸೇವೆ ಕಾಯಂ ಆಗದವರಿಗೂ ಬಡ್ತಿ ನೀಡಲಾಗುತ್ತಿದೆ. ಆದ್ದರಿಂದ ಜೇಷ್ಠತಾ ಪಟ್ಟಿ ಪ್ರಕಟಿಸುವ ಸಂಬಂಧ ಅರ್ಜಿದಾರರು ಸಲ್ಲಿಸಿರುವ ಮನವಿಗಳನ್ನು ಪರಿಗಣಿಸಬೇಕು ಮತ್ತು ಅರ್ಜಿದಾರರಿಗೆ ಬಡ್ತಿ ನೀಡಲು ಅನುಕೂಲವಾಗುವಂತೆ ಕಾಲಮಿತಿಯೊಳಗೆ ಜೇಷ್ಠತಾ ಪಟ್ಟಿ ಪ್ರಕಟಿಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಅರ್ಜಿದಾರರು ಮನವಿ ಮಾಡಿದ್ದಾರೆ. ಅಂತಿಮ ಜೇಷ್ಠತಾ ಪಟ್ಟಿ ಪ್ರಕಟ ಆಗುವ ತನಕ ಬಡ್ತಿ ನೀಡದಂತೆ ಪಾಲಿಕೆಗೆ ನಿರ್ದೇಶನ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.