ಮನೆ ರಾಜಕೀಯ ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

0

ಚಿಕ್ಕಮಗಳೂರು: ಒಕ್ಕಲಿಗ ಸಂಘದ ಕಾರ್ಯಕ್ರಮವೊಂದರಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್‌ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ಸೋಮವಾರ (ನ.25) ನಡೆದಿದೆ.

Join Our Whatsapp Group

ಜಿಲ್ಲಾ ಒಕ್ಕಲಿಗರ ಸಂಘದಿಂದ ಒಕ್ಕಲಿಗ ಸಮುದಾಯ ಭವನ 25 ವರ್ಷ ಪೂರೈಸಿದ ಹಿನ್ನೆಲೆ ಹಾಗೂ ನೂತನವಾಗಿ ನಿರ್ಮಿಸಿದ ಬೆಳ್ಳಿ ಭವನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಚಿವ ಕೆ.ಜೆ.ಜಾರ್ಜ್ ಭಾಷಣದ ವೇಳೆ ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಐದು ಗ್ಯಾರೆಂಟಿಗಳನ್ನು ನೀಡಿದೆ. ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಎಲ್ಲಾ ಸಮುದಾಯದ ಮಹಿಳೆಯರಿಗೂ ಐದು ಗ್ಯಾರೆಂಟಿಗಳನ್ನು ನೀಡಲಾಗಿದೆ ಎನ್ನುತ್ತಿದ್ದಂತೆ ಕಾರ್ಯಕ್ರಮದಲ್ಲಿ ಸಭಿಕರ ಸ್ಥಳದಲ್ಲಿ ಕುಳಿತ್ತಿದ್ದ ತುಡಕೂರು ಮಂಜು ಹಾಗೂ ಇತರರು ಇದು ರಾಜಕೀಯ ಅಥವಾ ಪಕ್ಷದ ಕಾರ್ಯಕ್ರಮವಲ್ಲವೆಂದು ಸಚಿವರ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ತಾವು ರಾಜಕೀಯ ಭಾಷಣ ಮಾಡುತ್ತಿಲ್ಲ. ತಪ್ಪಾಗಿ ಭಾವಿಸಬಾರದೆಂದು ಸಚಿವರು ಪದೇ ಪದೇ ಕೇಳಿಕೊಂಡ‌ ಬಳಿಕವೂ ಆಕ್ಷೇಪ ಜೋರಾಗುತ್ತಲೇ ಇತ್ತು.‌ ಹೀಗಾಗಿ ಮೈಕ್ ಬಿಟ್ಟು ಸಚಿವ ಜಾರ್ಜ್ ತಮ್ಮ ಸ್ಥಾನದಲ್ಲಿ ಕುಳಿತುಕೊಂಡರು.

ಶ್ರೀ ಡಾ| ನಿರ್ಮಲಾನಂದನಾಥ ಸ್ವಾಮೀಜಿ ಮಧ್ಯ ಪ್ರವೇಶಿಸಿ ಸಚಿವರು ಬೇರೆ ಕಾರ್ಯಕ್ರಮಕ್ಕೆ ತೆರಳಬೇಕಿದೆ. ಯಾಕೆ ಕಾರ್ಯಕ್ರಮದ ಮಧ್ಯೆ ತೆರಳುತ್ತಿದ್ದೇನೆಂದು ಹೇಳುವುದಕ್ಕಾಗಿ ಹಾಗೇ ಮಾತನಾಡಿದ್ದಾರೆ. ಅವರು ರಾಜಕೀಯ ಮಾತನಾಡಿದ್ದಾರೆಂದು ತಪ್ಪು ಭಾವಿಸಬೇಡಿ. ಅಥಿತಿಗಳನ್ನು ಸಹನೆಯಿಂದ ನಡೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ವಾತಾವರಣ ತಿಳಿಯಾಗುತ್ತಿದ್ದಂತೆ ಸಚಿವ ಕೆ.ಜೆ.ಜಾರ್ಜ್ ಮಾತು ಮುಂದುವರೆಸಿ ಕಾರ್ಯಕ್ರಮದಲ್ಲಿ ತಪ್ಪಾಗಿ ಮಾತನಾಡಿದ್ದರೆ ಕ್ಷಮೆ ಕೇಳುತ್ತೇನೆಂದು ಸ್ವಾಮೀಜಿ ಮತ್ತು ಸಭಿಕರ ಬಳಿ ಕ್ಷಮೆಯಾಚಿಸಿ, ನೆಹರು ಅವರು ವಾಜಿಪೇಯಿ ಅವರಿಗೆ ನೀನೊಂದು ದಿನ ಪ್ರಧಾನಮಂತ್ರಿ ಆಗುತ್ತೀಯ ಎಂದಿದ್ದರು. ವಾಜಿಪೇಯಿ ಅವರು ಇಂದಿರಾಗಾಂಧಿಯವರನ್ನು ಐರನ್ ಲೇಡಿ ಎಂದು ಕರೆದಿದ್ದರು. ಯಾರೇ ಒಳ್ಳೆಯ ಕೆಲಸ ಮಾಡಿದರೆ ಅದನ್ನು ಹೋಗಳಬೇಕು ಎಂದು ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದವರಿಗೆ ಮಾರ್ಮಿಕವಾಗಿ ನುಡಿದರು.