ಮನೆ ಕಾನೂನು ಚಿತ್ರಮಂದಿರಗಳಲ್ಲಿ ದೀರ್ಘ ಜಾಹೀರಾತಿಗೆ ಆಕ್ಷೇಪ: ಪಾಲುದಾರರೊಡನೆ ಚರ್ಚಿಸಲು ಸರ್ಕಾರಗಳಿಗೆ ಮಧ್ಯಪ್ರದೇಶ ಹೈಕೋರ್ಟ್ ಸಲಹೆ

ಚಿತ್ರಮಂದಿರಗಳಲ್ಲಿ ದೀರ್ಘ ಜಾಹೀರಾತಿಗೆ ಆಕ್ಷೇಪ: ಪಾಲುದಾರರೊಡನೆ ಚರ್ಚಿಸಲು ಸರ್ಕಾರಗಳಿಗೆ ಮಧ್ಯಪ್ರದೇಶ ಹೈಕೋರ್ಟ್ ಸಲಹೆ

0

ಚಿತ್ರಮಂದಿರಗಳಲ್ಲಿ ಚಲನಚಿತ್ರಗಳು ಆರಂಭವಾಗುವುದನ್ನು ವಿಳಂಬ ಮಾಡುವ ಜಾಹೀರಾತುಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಮಧ್ಯಪ್ರದೇಶ ಹೈಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಬಂಧಪಟ್ಟ ಎಲ್ಲಾ ಭಾಗೀದಾರರೊಂದಿಗೆ ಅರ್ಥಪೂರ್ಣ  ಚರ್ಚೆ ನಡೆಸಬೇಕೆಂದು ನಿರೀಕ್ಷಿಸುವುದಾಗಿ ತಿಳಿಸಿದೆ.

Join Our Whatsapp Group

ಸಮಯ ಅಮೂಲ್ಯ ಸಂಪನ್ಮೂಲ ಎಂಬುದನ್ನು ಮರೆಯಬಾರದು. ಜೊತೆಗೆ ವಿಭಿನ್ನ ದೃಷ್ಟಿಕೋನಗಳನ್ನು ಹೇಗೆ ಸಮನ್ವಯಗೊಳಿಸಬಹುದು ಎಂಬುದನ್ನು ಪ್ರತಿವಾದಿಗಳು ನೋಡಬೇಕು. ಆದ್ದರಿಂದ ಅಧಿಕಾರಿಗಳು ಎಲ್ಲಾ ಪಾಲುದಾರರೊಂದಿಗೆ ಅರ್ಥಪೂರ್ಣ ಚರ್ಚೆಯಲ್ಲಿ ತೊಡಗಬೇಕೆಂದು ನಿರೀಕ್ಷಿಸುವುದಾಗಿ ನ್ಯಾಯಮೂರ್ತಿಗಳಾದ ಆನಂದ್ ಪಾಠಕ್ ಮತ್ತು ಹಿರ್ದೇಶ್ ಅವರಿದ್ದ ಪೀಠ ಹೇಳಿತು.

ನಿಗದಿತ ಅವಧಿ ಮೀರಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಜಾಹೀರಾತು ಪ್ರಸಾರ ಮಾಡುತ್ತಿರುವುದನ್ನು ಪ್ರಶ್ನಿಸಿ ಗ್ವಾಲಿಯಾರ್‌ನ ಕಾನೂನು ವಿದ್ಯಾರ್ಥಿನಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಇದು ಪ್ರೇಕ್ಷಕರಿಗೆ ತೊಂದರೆ ಉಂಟುಮಾಡುತ್ತಿದ್ದು ಟಿಕೆಟ್‌ಗಳಲ್ಲಿ ಚಿತ್ರ ಮೂಡುವ ಸಮಯದ ಬಗ್ಗೆ ಉಲ್ಲೇಖಿಸಲಾಗಿದ್ದರೂ ದೀರ್ಘಾವಧಿಯ ಜಾಹೀರಾತುಗಳಿಂದಾಗಿ ಸಿನಿಮಾ ಆರಂಭವಾಗುವುದು ತಡವಾಗುತ್ತಿದೆ ಎಂದು ಅವರು ದೂರಿದ್ದರು.

ಆದರೆ ತೀರ್ಪು ನೀಡಲು ಪ್ರಕರಣ ಪಕ್ವವಾಗಿಲ್ಲ ಎಂದು ನ್ಯಾಯಾಲಯ ತಿಳಿಸಿತು. ಆಡಳಿತಾತ್ಮಕ ಚರ್ಚೆ ಮತ್ತು ನಿರ್ಧಾರಗಳನ್ನು ಕೈಗೊಳ್ಳುವುದು ಅಗತ್ಯವಿದೆ ಎಂದ ಅದು ಪ್ರಕರಣದ ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿದ ಬಳಿಕವೇ ವಸ್ತುನಿಷ್ಠವಾಗಿ ವಿಚಾರಣೆ ಮುಂದುವರೆಸಬಹುದು ನಂತರ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರ್ಧಾರಕ್ಕೆ ಬರಬೇಕು ಎಂಬುದಾಗಿ ತಿಳಿಸಿತು.

“ಇದನ್ನು ನೀತಿ ನಿರೂಪಣಾ ಹಂತದಲ್ಲಿ ಮತ್ತು ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿ ಚರ್ಚಿಸಿ ನಿರ್ಧರಿಸಬೇಕು. ಇದರಿಂದಾಗಿ ಅದರಲ್ಲಿ ಭಾಗಿಯಾಗಿರುವ ಬಹು ಪಾಲುದಾರರೊಂದಿಗೆ ಸಂಬಂಧಿತ ಅಧಿಕಾರಿಗಳು ಸಮಾಲೋಚನೆ ನಡೆಸಬಹುದು. ನಂತರ, ಅಗತ್ಯವಿದ್ದರೆ, ಸೂಕ್ತ ತೀರ್ಪು ಇಲ್ಲವೇ ರೂಪಿಸಬಹುದಾದಂತಹ ಮಾರ್ಗಸೂಚಿಗಳನ್ನು ನೀಡಬಹುದು” ಎಂದು ಅದು ವಿವರಿಸಿತು.