ಮೈಸೂರು : ಇಂದು ಮೊದಲ ಆಷಾಡ ಶುಕ್ರವಾರದ ನಿಮಿತ್ತ ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 5.30 ರಿಂದಲೇ ಜನಸಾಗರ ಕಂಡು ಬಂದಿದೆ. ಭಕ್ತಾದಿಗಳು ದೂರದೂರುಗಳಿಂದ ಚಾಮುಂಡೇಶ್ವರಿ ದರ್ಶನಕ್ಕೆ ಆಗಮಿಸುತ್ತಿದ್ದು, ಇಂದು ವಿಶೇಷವಾದ ಲಕ್ಷ್ಮೀ ಅಲಂಕಾರದಲ್ಲಿ ಚಾಮುಂಡೇಶ್ವರಿಯು ದರ್ಶನ ನೀಡಲಿದ್ದಾಳೆ.
ಚಾಮುಂಡಿ ಬೆಟ್ಟಕ್ಕೆ ಮೂರು ದಿನಗಳ ಕಾಲ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಮೊದಲ ಆಷಾಢ ಶುಕ್ರವಾರದಂದು ಎಲ್ಲಾ ಭಕ್ತಾಧಿಗಳಿಗೆ ಉಚಿತ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಶನಿವಾರ ಮತ್ತು ಭಾನುವಾರ ಮಹಿಳಾ ಭಕ್ತರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಮತ್ತು ಭಾನುವಾರ ಪುರುಷರು ಟಿಕೆಟ್ ಪಡೆದು ಪ್ರಯಾಣಿಸಬೇಕಿದೆ.
ಮೈಸೂರು ನಗರ ಸಾರಿಗೆಯಿಂದ ಸುಮಾರು 50ಕ್ಕೂ ಹೆಚ್ಚು ಬಸ್ ಗಳು ನಿಯೋಜನೆ ಮಾಡಲಾಗಿದ್ದು, 300 ರೂಪಾಯಿ ಮತ್ತು 2000 ರೂಪಾಯಿ ನೀಡಿ ಪಾಸ್ ಪಡೆದು ಸಾಗುವ ಭಕ್ತರಿಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಧರ್ಮ ದರ್ಶನ (ಉಚಿತ ದರ್ಶನ) ಪಡೆಯುವ ಭಕ್ತಾಧಿಗಳೂ ಸೇರಿದಂತೆ 3 ವಿಭಾಗ ಮಾಡಿ ಪ್ರತ್ಯೇಕವಾಗಿ ಪ್ರಯಾಣಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. 2000 ರೂಪಾಯಿ ಟಿಕೆಟ್ ಪಡೆದ ಭಕ್ತರನ್ನು ಕರೆದೊಯ್ಯಲು ಮಲ್ಟಿಪಲ್ ಆಕ್ಸಲ್ ಹವಾನಿಯಂತ್ರಿತ ಎಂಟು ಹೈಟೆಕ್ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.
ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳ ಮೂಲಕ ಕಣ್ಗಾವಲು ಇರಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದೆ.















