ಆಕ್ಲೆಂಡ್: ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡ 7 ವಿಕೆಟ್ ಅಂತರದ ಜಯ ಸಾಧಿಸಿದೆ.
ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ವಿಕೆಟ್ ಕೀಪರ್ ಟಾಮ್ ಲಥಾಮ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ತಮ್ಮ ತಂಡಕ್ಕೆ ಇನ್ನೂ 17 ಎಸೆತಗಳು ಬಾಕಿ ಇರುವಂತೆಯೇ ಜಯ ತಂದುಕೊಟ್ಟರು.
ಇಲ್ಲಿನ ಈಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಕಲೆಹಾಕಿತ್ತು. ಇನಿಂಗ್ಸ್ ಆರಂಭಿಸಿದ ನಾಯಕ ಶಿಖರ್ ಧವನ್ (72) ಹಾಗೂ ಶುಭಮನ್ ಗಿಲ್ (50) ಜೋಡಿ ಮೊದಲ ವಿಕೆಟ್‌ಗೆ ಶತಕದ (124 ರನ್) ಜೊತೆಯಾಟವಾಡಿದರು.
ಬಳಿಕ ಬಂದ ಶ್ರೇಯಸ್ ಅಯ್ಯರ್ ಬೀಸಾಟದ ಮೂಲಕ ಗಮನ ಸೆಳೆದರು. ಅವರು 76 ಎಸೆತಗಳಲ್ಲಿ 80 ರನ್ ಸಿಡಿಸಿದರು. ಆದರೆ, ವಿಕೆಟ್ ಕೀಪರ್ ರಿಷಭ್ ಪಂತ್ (15) ಹಾಗೂ ಟಿ20 ಸರಣಿಯ ಹೀರೊ ಸೂರ್ಯಕುಮಾರ್ ಯಾದವ್ (4) ವೈಫಲ್ಯ ಅನುಭವಿಸಿದರು. ಕೊನೆಯಲ್ಲಿ ಉಪಯುಕ್ತ ಆಟವಾಡಿದ ಸಂಜು ಸ್ಯಾಮ್ಸನ್ (36) ಹಾಗೂ ವಾಷಿಂಗ್ಟನ್ ಸುಂದರ್ (ಅಜೇಯ 37) ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸಿದರು.
307 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ನ ಆರಂಭಿಕ ಜೋಡಿ ಹೆಚ್ಚು ರನ್ ಗಳಿಸಲಿಲ್ಲ. ಫಿನ್ ಅಲೆನ್ 22 ರನ್ ಗಳಿಸಿದರೆ, ಅವರ ಜೊತೆಗಾರ ಡೆವೋನ್ ಕಾನ್ವೆ 24 ರನ್ ಗಳಿಸಿ ಔಟಾದರು. ಬಳಿಕ ಬಂದ ಡರೇಲ್ ಮಿಚೇಲ್ (11) ಸಹ ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. ತಂಡದ ಮೊತ್ತ 88 ರನ್ ಗಳಿಗೆ 3 ವಿಕೆಟ್ ಆಗಿದ್ದಾಗ ಜೊತೆಯಾದ ಕೇನ್ ಹಾಗೂ ಲಥಾಮ್ ಮುರಿಯದ ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ 221 ರನ್ ಕಲೆಹಾಕಿದರು.
ಬಿರುಸಿನ ಬ್ಯಾಟಿಂಗ್ ನಡೆಸಿದ ಲಥಾಮ್ ಕೇವಲ 104 ಎಸೆತಗಳಲ್ಲಿ 19 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 145 ರನ್ ಗಳಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ ವೈಯಕ್ತಿಕ ಗರಿಷ್ಠ ಮೊತ್ತ. ಇತ್ತ ಅವರಿಗೆ ಉತ್ತಮ ಸಹಕಾರ ನೀಡಿದ ಕೇನ್, 98 ಎಸೆತಗಳಲ್ಲಿ ಅಜೇಯ 94 ರನ್ ಕಲೆಹಾಕಿದರು .
ಹೀಗಾಗಿ ಭಾರತ ತಂಡ ಬೃಹತ್ ಮೊತ್ತ ಕಲೆಹಾಕಿಯೂ ಸೋಲು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಟಾಮ್ ಪಂದ್ಯ ಶ್ರೇಷ್ಠ ಎನಿಸಿದರು.ಟೀಂ ಇಂಡಿಯಾ ಪರ ಉಮ್ರಾನ್ ಮಲಿಕ್ ಎರಡು ವಿಕೆಟ್ ಪಡೆದರೆ, ಅರ್ಶದೀಪ್ ಸಿಂಗ್ ಒಂದು ವಿಕೆಟ್ ಕಿತ್ತರು.