ಒಡಿಶಾದ ಬಾಲಸೋರ್‌ನಲ್ಲಿ ಕಳೆದ ಶುಕ್ರವಾರ ಸಂಭವಿಸಿದ್ದ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಜೂನ್ 2ರಂದು ಸಂಭವಿಸಿದ ಅಪಘಾತದಲ್ಲಿ 288 ಮಂದಿ ಸಾವನ್ನಪ್ಪಿದ್ದು 1,000 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್ ಪ್ರೆಸ್ ಮತ್ತು ಬೆಂಗಳೂರು-ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲುಗಳ ನಡುವೆ ಅಪಘಾತ ನಡೆದಿತ್ತು.
ವಕೀಲ ವಿಶಾಲ್ ತಿವಾರಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಕೇಂದ್ರ ಸರ್ಕಾರ ಮತ್ತು ಭಾರತೀಯ ರೈಲ್ವೆಗೆ ಈ ಕೆಳಗಿನ ನಿರ್ದೇಶನಗಳನ್ನು ನೀಡುವಂತೆ ಕೋರಿದೆ:
ರೈಲ್ವೆಯಲ್ಲಿನ ಪ್ರಸ್ತುತ ಅಪಾಯ ಮತ್ತು ಸುರಕ್ಷತಾ ಕ್ರಮಗಳನ್ನು ವಿಶ್ಲೇಷಿಸಲು, ಪರಿಶೀಲಿಸಲು; ಜೊತೆಗೆ ಘಟನೆಯ ಮೂಲ ಕಾರಣ ಪತ್ತೆ ಹಚ್ಚಲು ಹಾಗೂ ಎರಡು ತಿಂಗಳೊಳಗೆ ‘ವ್ಯವಸ್ಥಿತ ಸುರಕ್ಷತಾ ಮಾರ್ಪಾಡುಗಳನ್ನು’ ಸೂಚಿಸಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಮತ್ತು ತಾಂತ್ರಿಕ ಸದಸ್ಯರನ್ನೊಳಗೊಂಡ ತಜ್ಞರ ಆಯೋಗ ರಚಿಸಬೇಕು.
ಸಾರ್ವಜನಿಕ ಸುರಕ್ಷತೆಗಾಗಿ ತಕ್ಷಣವೇ ಜಾರಿಗೆ ಬರುವಂತೆ ಕವಚ್ ಹೆಸರಿನ ಸ್ವಯಂಚಾಲಿತ ರೈಲು ರಕ್ಷಣಾ (ಎಟಿಪಿ) ವ್ಯವಸ್ಥೆ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು.
ಇಂತಹ ಅಪಘಾತಗಳು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕುಗಳನ್ನು ಉಲ್ಲಂಘಿಸುತ್ತವೆ.
ಹೀಗೆ ರೈಲುಗಳು ಹಳಿ ತಪ್ಪುವುದಕ್ಕೆ ಸಂಬಂಧಿಸಿದಂತೆ ಸರ್ಕಾರವೇ ನಡೆಸಿದ ಹಿಂದಿನ ತನಿಖೆಗಳು ಅಗತ್ಯ ಫಲಿತಾಂಶ ನೀಡುವಲ್ಲಿ ವಿಫಲವಾಗಿವೆ. ಹೀಗಾಗಿ ಮನಸೋಇಚ್ಛೆಯ ಮತ್ತು ನಿರ್ಲಕ್ಷ್ಯದಿಂದ ವರ್ತಿಸಿರುವ ಅಧಿಕಾರಿಗಳು ಇಂತಹ ಘಟನೆಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪ ಅಗತ್ಯವಿದೆ ಎಂದು ದೇಶಕ್ಕೆ ತೋರಿಸುತ್ತಿದ್ದಾರೆ.
ಆಡಳಿತ ಯಂತ್ರ ಸಾರ್ವಜನಿಕ ಸುರಕ್ಷತೆ ಮತ್ತು ಜೀವಗಳ ಬಗ್ಗೆ ಹೆಚ್ಚು ಕಾಳಜಿ ತೋರಬೇಕಿದೆ.
ಈ ರೀತಿಯ ಘಟನೆಗಳಿಂದ ಉಳಿದ ರೈಲುಗಳು ರದ್ದಾಗುವ, ಮಾರ್ಗ ಬದಲಿಸುವಂತಹ ಬಹುಸ್ತರದ ಪರಿಣಾಮ ಬೀರಿ ಭಾರೀ ತೊಂದರೆ ನೀಡುತ್ತವೆ.
ಇಂತಹ ಘಟನೆಗಳಿಂದ ಸಾರ್ವಜನಿಕ ಆಸ್ತಿಗೆ ವ್ಯಾಪಕ ಹಾನಿ ಉಂಟಾಗಲಿದ್ದು ಇದು ಅಂತಿಮವಾಗಿ ದೇಶದ ತೆರಿಗೆದಾರರ ಹಣ ಪೋಲಾಗುವಂತೆ ಮಾಡುತ್ತದೆ.
ಅಲ್ಲದೆ ಈ ಬಗೆಯ ದುರಂತಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪರಿಹಾರ ಒದಗಿಸುವ ಕಾರ್ಯವಿಧಾನದ ಅಗತ್ಯವಿದೆ.