ಮೈಸೂರು(Mysuru): ಪದಾಧಿಕಾರಿಗಳು ಸಂಘಟನೆ ಬಲಪಡಿಸಲು ಶ್ರಮಿಸಬೇಕು. ನಮ್ಮ ತತ್ವ–ಸಿದ್ಧಾಂತದಂತೆ ಕೆಲಸ ಮಾಡಬೇಕು ಎಂದು ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು.
ಸಕ್ರಿಯಗಾಗಿ ಕಾರ್ಯನಿರ್ವಹಿಸದಿರುವ ಕಾಂಗ್ರೆಸ್ ಮುಂಚೂಣಿ ಘಟಕಗಳ ಪದಾಧಿಕಾರಿಗಳನ್ನು ತುರ್ತಾಗಿ ಬದಲಾವಣೆ ಮಾಡಲಾಗುವುದು. ಪದಾಧಿಕಾರಿಗಳ ಕಾರ್ಯವೈಖರಿಯನ್ನು ಸಮಗ್ರವಾಗಿ ಪರಿಶೀಲಿಸಿ, ಪರಿಣಾಮಕಾರಿಯಾಗಿ ಕೆಲಸ ಮಾಡದವರನ್ನು ಕೂಡಲೇ ಬದಲಾಯಿಸಿ ಹೊಸ ಪದಾಧಿಕಾರಿಗಳಿಗೆ ಅವಕಾಶ ಕೊಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ ಎಂದರು.
ಮುಂಬರುವ ಚುನಾವಣೆಗಳಲ್ಲಿ ನಮಗೆ ಹಿಂದುಳಿದ ವರ್ಗದವರು, ದಲಿತರು, ಅಲ್ಪಸಂಖ್ಯಾತರ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಬರುವಂತೆ ಪದಾಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಕೆ.ಮಾರುತಿ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಬೇಕು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಬಂದರೆ, ಹಿಂದುಳಿದ ವರ್ಗಗಳಿಗೆ ಶಕ್ತಿ ಸಿಗುತ್ತದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಹಿಂದುಳಿದ ವರ್ಗಗಳ ಸಮಾವೇಶ ಆಯೋಜಿಸಲಾಗುವುದು ಎಂದರು.
ಹಿರಿಯ ಉಪಾಧ್ಯಕ್ಷರಾದ ಹೆಡತಲೆ ಮಂಜುನಾಥ್, ವೆಂಕಟರಮಣ, ಹಿಂದುಳಿದ ವರ್ಗಗಳ ವಿಭಾಗದ ಪದಾಧಿಕಾರಿಗಳಾದ ಸ್ವಾಮಿಗೌಡ, ಹಿನಕಲ್ ಉದಯ್, ಕೆ.ಸಿದ್ದಶೆಟ್ಟಿ, ಮಹದೇವಸ್ವಾಮಿ, ಶಿವಣ್ಣ, ಕಾಳಿಹುಂಡಿ ಪುಟ್ಟಸ್ವಾಮಿ, ಬಸವರಾಜ, ಚಿಕ್ಕಸ್ವಾಮಿಗೌಡ, ಸಂಜೀವ್ ಕುಮಾರ್, ಮಲ್ಲಹಳ್ಳಿ ಪುಟ್ಟಸ್ವಾಮಿ, ಅಂದಾನಿ, ರಾಜೇಶ್, ಜಯರಾಮ್, ಕಣೇನೂರು ಶಿವಕುಮಾರ್, ಕುಸುಮಾ, ಲೋಕೇಶ್, ರವಿ ಗೌಡ ಇದ್ದರು.