ಮೈಸೂರು.: ಮುಂಬರುವ ಲೋಕಸಭಾ ಚುನಾವಣೆಯ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿ, ಚುನಾವಣಾ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಂಡು ಬರದ ರೀತಿಯಲ್ಲಿ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ ರಾಜೇಂದ್ರ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ CEO ಅವರ ಅಧ್ಯಕ್ಷತೆಯಲ್ಲಿ ಲೋಕಸಭಾ ಎಲೆಕ್ಷನ್ 2024 ರ ಸಂಬಂಧ ನಡೆದ ವಿಡಿಯೋ ಸಂವಾದ ಸಭೆಯ ನಂತರ ಜಿಲ್ಲೆಯ ಸಹಾಯಕ ಚುನಾವಣಾಧಿಕಾರಿ, ನೋಡಲ್ ಅಧಿಕಾರಿಗಳನ್ನು ಉದ್ದೇಶಿಸಿ ಸಭೆ ಕೈಗೊಂಡರು.
ಚುನಾವಣೆಯು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಿ ಎಲ್ಲಾ ಮತಗಟ್ಟೆಗಳಲ್ಲಿ Assured Minimum Facilities ಇರುವುದನ್ನು ಖಾತ್ರಿ ಪಡಿಸಿಕೊಳ್ಳಲು ಅದರಲ್ಲೂ ಪ್ರಮುಖವಾಗಿ ವಿದ್ಯುತ್, ಶೌಚಾಲಯ, ರ್ಯಾಂಪ್, ಕುಡಿಯುವ ನೀರಿನ ಸೌಕರ್ಯ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸಲು ತಿಳಿಸಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಸಂದರ್ಭದಲ್ಲಿ ಜಿಲ್ಲಾದ್ಯಂತ ಪ್ಲೆಕ್ಸ್ ಬ್ಯಾನರ್ ಗಳುನ್ನು ಹಾಕದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು .
ಚೆಕ್ ಪೋಸ್ಟ್ ಗಳಲ್ಲಿ ಚುನಾವಣಾ ಕಾರ್ಯನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ದಿಸೆಯಲ್ಲಿ ಕ್ರಮವಹಿಸಲು ತಿಳಿಸಿದರು.
ಪೋಲಿಸ್ ಅಧಿಕಾರಿಗಳ ಅನುಮತಿ ಇಲ್ಲದೆ ಸಾರ್ವಜನಿಕರು ಯಾವುದೇ ರೀತಿಯ ಸಭೆ ಸಮಾರಂಭಗಳನ್ನು ಆಯೋಜಿಸುವಂತಿಲ್ಲ, ಹಾಗೇನಾದರೂ ಮಾಡಿದ್ದು ಕಂಡು ಬಂದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಅತಿ ಹೆಚ್ಚಾಗಿ ಜಾತ್ರೆ, ಉತ್ಸವ ಗಳು ನಡೆಯುವುದರಿಂದ ಅಲ್ಲಿ ಜನರು ಸೇರುವುದರಿಂದ ಯಾವುದೇ ರೀತಿಯ ಗಲಾಟೆಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಸಹಾಯಕ ಪರಿಶೀಲನಾ ಅಧಿಕಾರಿಗಳು ತಮ್ಮ ತಮ್ಮ ಅಸೆಂಬಲಿ ಕ್ಷೇತ್ರಕ್ಕೆ ತೆರಳಿ ಅಲ್ಲಿರುವಂತಹ ಸಮಸ್ಯೆಗಳ ಬಗ್ಗೆ ಪರಿಶೀಲಿಸಬೇಕು ಎಂದರು.
ಸಭೆಯಲ್ಲಿ ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನೊತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.