ಮನೆ ಅಪರಾಧ ಐಎಎಸ್ ಅಧಿಕಾರಿಗಳ ಸಹಿ ನಕಲು ಮಾಡಿದ ಅಧಿಕಾರಿ: ಬಿಎಂಟಿಸಿಯಲ್ಲಿ ಮತ್ತೊಂದು ಗೋಲ್ ಮಾಲ್

ಐಎಎಸ್ ಅಧಿಕಾರಿಗಳ ಸಹಿ ನಕಲು ಮಾಡಿದ ಅಧಿಕಾರಿ: ಬಿಎಂಟಿಸಿಯಲ್ಲಿ ಮತ್ತೊಂದು ಗೋಲ್ ಮಾಲ್

0

ಬೆಂಗಳೂರು(Bengaluru): ನಿರಂತರವಾಗಿ ಆರ್ಥಿಕ ಸಂಕಷ್ಟದ ಸುಳಿಯಲ್ಲಿರುವ ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಮತ್ತೊಂದು ಗೋಲ್‌ಮಾಲ್‌ ನಡೆದಿದ್ದು, ಮೂವರು ಐಎಎಸ್ ಅಧಿಕಾರಿಗಳ ಸಹಿಯನ್ನು ಹಿರಿಯ ಅಧಿಕಾರಿಗಳೇ ನಕಲು ಮಾಡಿ ಟೆಂಡರ್ ನವೀಕರಣ ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸಿರುವುದು ತಡವಾಗಿ ಗೊತ್ತಾಗಿದೆ.

ಸಂಸ್ಥೆಯ ವಾಣಿಜ್ಯ ಶಾಖೆಯ ಸುಮಾರು 20ಕ್ಕೂ ಅಧಿಕ ಕಡತಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರ ಮತ್ತು ಭದ್ರತಾ ಹಾಗೂ ಜಾಗೃತ ದಳದ ನಿರ್ದೇಶಕರ ಸಹಿ ಫೋರ್ಜರಿ ಮಾಡಿ ಕೋಟ್ಯಂತರ ರೂಪಾಯಿ  ವಂಚಿಸಲಾಗಿದೆ. ಅದೂ ಕಳೆದ 2 ವರ್ಷಗಳಿಂದ ಈ “ಫೋರ್ಜರಿ’ ಅಡತಡೆ ಇಲ್ಲದೆ ಭರ್ಜರಿಯಾಗಿ ನಡೆದುಕೊಂಡು ಬಂದಿದ್ದು, ಈ ಅವಧಿಯಲ್ಲಿ ಹಿಂದಿನ ಇಬ್ಬರು ವ್ಯವಸ್ಥಾಪಕ ನಿರ್ದೇಶಕರು ಸೇರಿ ಒಟ್ಟು ಮೂವರು ವ್ಯವಸ್ಥಾಪಕ ನಿರ್ದೇಶಕರ ಹಸ್ತಾಕ್ಷರ ನಕಲು ಮಾಡಿ ಹಲವು ಅನುಮತಿಗಳನ್ನು ನೀಡಿರುವುದು ಬಹಿರಂಗಗೊಂಡಿದೆ.

ಸಹಿ ನಕಲು ಪ್ರಕರಣದ ಪ್ರಮುಖ ರೂವಾರಿ ಎನ್ನಲಾಗಿರುವ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿದ್ದ(ವಾಣಿಜ್ಯ) ಶ್ರೀರಾಮ್‌ ಮುಲ್ಕಾವಾನ್‌ ಮತ್ತು ಆ ವಿಭಾಗದ ಸಿಬ್ಬಂದಿ ವಿರುದ್ಧ ಬಿಎಂಟಿಸಿ ಸಹಾಯಕ ಭದ್ರತಾ ಮತ್ತು ಜಾಗೃತ ಅಧಿಕಾರಿ ಸಿ.ಕೆ.ರಮ್ಯಾ ಅವರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಶ್ರೀರಾಮ್ ಮುಲ್ಕಾವಾನ್ ಅವರು ಕಲಬುರ್ಗಿಗೆ ವರ್ಗಾವಣೆಯಾಗಿದ್ದು, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಆಡಳಿತ ಮಂಡಳಿ ನಿರ್ದೇಶಕರಾಗಿದ್ದರು.

ಬಿಎಂಟಿಸಿ ಹಾಲಿ ವ್ಯವಸ್ಥಾಪಕಿ ನಿರ್ದೇಶಕಿ ಜಿ.ಸತ್ಯವತಿ, ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾದ ವಿ.ಅನ್ಬುಕುಮಾರ್, ಸಿ.ಶಿಖಾ, ಭದ್ರತಾ ಮತ್ತು ಜಾಗೃತಿ ವಿಭಾಗದ ನಿರ್ದೇಶಕಿ ಜಿ.ರಾಧಿಕಾ, ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಸೂರ್ಯಸೇನ ಅವರ ಸಹಿಗಳನ್ನು ನಕಲು ಮಾಡಿ ಕರಾರು ಒಪ್ಪಂದ ಮತ್ತು ಆದೇಶ ಪತ್ರಗಳನ್ನು ಹೊರಡಿಸಿ ಬಿಎಂಟಿಸಿಗೆ ದ್ರೋಹ ಮಾಡಿದ್ದಾರೆ ಎಂದು ಶ್ರೀರಾಮ್ ಮುಲ್ಕಾವಾನ್ ವಿರುದ್ಧ ಎಫ್‌’ಐಆರ್‌ನಲ್ಲಿ ದೂರಲಾಗಿದೆ.

ಸಮಗ್ರ ತನಿಖೆಗೆ ಆದೇಶ

ಪ್ರಾಥಮಿಕ ತನಿಖೆಯಲ್ಲಿ ಕೆಲವು ಪ್ರಕರಣಗಳಷ್ಟೇ ಬಹಿರಂಗವಾಗಿದ್ದು, ಅವರ ಅವಧಿಯಲ್ಲಿನ ಎಲ್ಲಾ ಕಡತಗಳ ಸಮಗ್ರ ತನಿಖೆಗೆ ಆದೇಶಿಸಲಾಗಿದೆ ಎಂದು ಜಿ.ಸತ್ಯವತಿ ತಿಳಿಸಿದರು.

ಶ್ರೀರಾಮ್ ಮುಲ್ಕಾವಾನ್ ಅವರನ್ನು ಅಮಾನತು ಮಾಡಲು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಶಿಫಾರಸು ಮಾಡಲಾಗಿತ್ತು. ಕೂಡಲೇ ಅಮಾನತು ಆದೇಶವನ್ನು ಅವರು ಹೊರಡಿಸಿದ್ದಾರೆ. ಆ ವಿಭಾಗದ ಸಿಬ್ಬಂದಿಯೂ ಈ ಅಕ್ರಮದಲ್ಲಿ ಭಾಗಿಯಾಗಿರುವ ಅನುಮಾನ ಇದೆ. ತನಿಖೆಯಿಂದ ಬಹಿರಂಗವಾಗಲಿದೆ ಎಂದು ಹೇಳಿದರು.

ನಕಲು ಸ್ಯಾಂಪಲ್‌ ಗ‌ಳು

ಬಸ್‌ ಹಿಂಭಾಗಗಳಲ್ಲಿ ಜಾಹೀರಾತು ಅಳವಡಿಸುವ ಗುತ್ತಿಗೆ ಪಡೆದ ಕಂಪನಿಯ ಟೆಂಡರ್‌ ಅವಧಿ ಮುಗಿದ ನಂತರವೂ ಎಂಡಿ ಫೋರ್ಜರಿ ಮಾಡಿ ಮತ್ತೆ ಎರಡು ವರ್ಷ ವಿಸ್ತರಣೆ ಮಾಡಲಾಗಿದೆ. ಒಂದು ಬಸ್‌ ಜಾಹೀರಾತು ಅಳವಡಿಕೆಗೆ 5 ಸಾವಿರ ರೂ. ಸುಮಾರು ಸಾವಿರ ಬಸ್‌’ಗಳನ್ನು ಕಂಪನಿಯೊಂದು ಗುತ್ತಿಗೆ ಪಡೆದಿದೆ. ತಿಂಗಳಿಗೆ ಈ ಮೊತ್ತವೇ ಅಂದಾಜು 50 ಲಕ್ಷ ಆಗುತ್ತದೆ.

ಶಾಂತಿನಗರ ಟಿಟಿಎಂಸಿಯಲ್ಲಿ ಪಾರ್ಕಿಂಗ್‌ ಟೆಂಡರ್‌ ಮುಗಿದಿದ್ದರೂ, ಅನುಮತಿ ಇಲ್ಲದೆ ತಾತ್ಕಾಲಿಕ ಟೆಂಡರ್‌ ವರ್ಷಗಟ್ಟಲೆ ಮುಂದುವರಿಸಲಾಯಿತು. ಆದರೆ, ಗುತ್ತಿಗೆ ಪಡೆದ ವ್ಯಕ್ತಿ ಸಂಸ್ಥೆಗೆ ಬಾಡಿಗೆಯನ್ನೂ ಪಾವತಿಸಿಲ್ಲ; ಜಾಗವನ್ನೂ ಹಸ್ತಾಂತರಿಸಲಿಲ್ಲ. ಭದ್ರತಾ ಠೇವಣಿ 32 ಲಕ್ಷ ರೂ. ಇದೆ. ಅದನ್ನು ಮೀರಿ ಬಾಡಿಗೆ ಮೊತ್ತ 68 ಲಕ್ಷ ರೂ. ಆಗಿದೆ. ಇದನ್ನು ವಸೂಲಿ ಮಾಡಲಿಲ್ಲ.

ಪ್ರಮುಖ ನಿಲ್ದಾಣಗಳಲ್ಲಿ ಮಳಿಗೆಗಳ ಗುತ್ತಿಗೆ ಅವಧಿ ಮುಗಿಯುತ್ತಿದ್ದಂತೆ ಪ್ರತಿ ವರ್ಷ ನವೀಕರಿಸಬೇಕು. ಒಮ್ಮೆಲೆ ಎರಡು-ಮೂರು ವರ್ಷ ನವೀಕರಿಸಲಾಗಿದೆ.

ಹಿಂದಿನ ಲೇಖನಕನಕದಾಸ ನಗರದಲ್ಲಿ ನೈಪುಣ್ಯ ಸ್ಕೂಲ್ ಕಾರ್ಪೋರೇಟ್ ಕಚೇರಿ ಆರಂಭ
ಮುಂದಿನ ಲೇಖನಸೋಲಿನ ಭಯ ಕಾಡುತ್ತಿರುವುದು ಕಾಂಗ್ರೆಸ್ಸಿಗಲ್ಲ, ಬಿಜೆಪಿಗೆ: ಸಿದ್ದರಾಮಯ್ಯ