ಬೆಂಗಳೂರು: ಜನರು ಕಾನೂನು ಬಾಹಿರವಾಗಿ ಮನೆಗಳನ್ನು ಕಟ್ಟಿಕೊಳ್ಳಬಾರದು. ಕಟ್ಟಡ ನಿರ್ಮಾಣಕ್ಕೆ ಮುಂಚಿತವಾಗಿ ಅನುಮತಿ ಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ಇದೇ ವೇಳೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಗಳುಗಳ ಆರೋಗ್ಯ ವಿಚಾರಿಸಿದರು.
ಕಾಮಗಾರಿ ನಿಲ್ಲಿಸುವಂತೆ ನೋಟಿಸ್ ನೀಡಿದ ನಂತರವೂ ಕಟ್ಟಡ ಮಾಲಿಕರು ಹಾಗೂ ಗುತ್ತಿಗೆದಾರರು ಕಾಮಗಾರಿಯನ್ನು ನಿಲ್ಲಿಸದ ಕಾರಣ ಈ ಘಟನೆ ನಡೆದಿದೆ. ಇಂತಹ ಘಟನೆಗಳು ಮರುಕಳಿಸದಿರಲು ಸಾರ್ವಜನಿಕರು ಕಟ್ಟಡ ನಿರ್ಮಾಣಕ್ಕೆ ಮುಂಚಿತವಾಗಿ ಅನುಮತಿ ಪಡೆಯಬೇಕು. ಜತೆಗೆ ಎಇಇ ನಿಂದ ಸೂಕ್ತ ಪರಿಶೀಲನೆಯಾಗಬೇಕು. ಇದರ ಜೊತೆಗೆ ಕಳಪೆ ಕಾಮಗಾರಿ ಮಾಡದೆ ಕಟ್ಟಡದ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
ಈ ಕಟ್ಟಡ ಕುಸಿತ ನಡೆದಿರುವುದು ಕಳಪೆ ಕಾಮಗಾರಿಯಿಂದಾಗಿದೆಯೇ ಹೊರತು ಮಳೆಯ ಕಾರಣದಿಂದಲ್ಲ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಅನಧಿಕೃತ ಕಟ್ಟಡಗಳಿಗೆ ಅನುಮತಿ ನೀಡಬಾರದು. ಒಂದು ವೇಳೆ ನಿರ್ಮಿಸಿದರೆ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಸಿಎಂ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆಗಳಲ್ಲಿ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವಿಪತ್ತು ನಿರ್ವಹಣೆ ಗಾಗಿ 3 ಸಾವಿರ ಕೋಟಿ ರೂ. ಸಾಲ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ವಿಪಕ್ಷ ನಾಯಕನಾಗಿದ್ದಾಗ ನಾನು ದೋಣಿಯಲ್ಲಿ ಕುಳಿತು ನೆರೆ ವೀಕಿಸಿದ್ದೆ
ಮಳೆ ನಿರ್ವಹಣೆಯನ್ನು ಸರ್ಕಾರ ಸಮರ್ಪಕವಾಗಿ ಮಾಡುತ್ತಿಲ್ಲ ಎಂದು ಪ್ರತಿಪಕ್ಷದವರ ಟೀಕೆ ಮಾಡು ತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಟೀಕೆಗಳನ್ನು ಮಾಡುವುದು ಸುಲಭ. ಹಿಂದಿನ ಸರ್ಕಾರದ ಅವಧಿಯಲ್ಲೂ ಮಳೆ ಸಂಭವಿಸಿದ್ದು, ಪ್ರತಿಪಕ್ಷದ ನಾಯಕನಾಗಿ ನಾನು ದೋಣಿಯಲ್ಲಿ ಕುಳಿತು ಸ್ಥಳ ವೀಕ್ಷಣೆ ಮಾಡಿದ್ದೆ ಎಂದು ತಿರುಗೇಟು ನೀಡಿದರು.