ರಾಮನಗರ: ನಮ್ಮನ್ನು ಜನ ಆಯ್ಕೆಮಾಡಿದ್ದಾರೆ. ಜನರ ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಸರ್ಕಾರದ ಸೇವೆ ಮಾಡಲು ನೀವಿದ್ದಿರಿ. ರಾಜಕಾರಣಿಗಳು ಅಧಿಕಾರಿಗಳ ಬಳಿ ಜನ ಬರೋದು ಸಮಸ್ಯೆ ಬಗೆಹರಿಯದೇ ಇದ್ದಾಗ. ಆ ಸಮಸ್ಯೆ ಬಗೆಹರಿಸಬೇಕಾದ್ದು ನಮ್ಮ ಕರ್ತವ್ಯ. ಕಾನೂನು ಚೌಕಟ್ಟಿನೊಳಗೆ ಪರಿಹರಿಸಿ ಎಂದು ಉಪ ಮುಖ್ಯಮಂತ್ರಿಗಳು, ಭಾರಿ ಮತ್ತು ಮಧ್ಯಮ ನೀರಾವರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2022-23ನೇ ಸಾಲು ಮತ್ತು 23-24ನೇ ಸಾಲಿನ ತ್ರೆöÊಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮಗಳೂ ಸೇರಿದಂತೆ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ನಮ್ಮ ಸರ್ಕಾರವನ್ನು ಜನತೆ ಸುಮ್ಮನೆ ಆಯ್ಕೆ ಮಾಡಿಲ್ಲ. ಉತ್ತಮ ಆಡಳಿತ ಕೊಡ್ತೀವಿ ಅಂತ ಆಯ್ಕೆ ಮಾಡಿದ್ದಾರೆ. ನೀವು ಯಾರಿಗೂ ಲಂಚ ಕೊಡಬೇಡಿ. ನೀವು ಲಂಚ ತಗೋ ಬೇಡಿ. ನಾನು ಯಾರನ್ನು ವರ್ಗಾವಣೆ ಮಾಡಿಸೋಲ್ಲ. ನಿಮ್ಮತ್ರ ಯಾವ ರೀತಿ ಕೆಲಸ ಮಾಡಿಸಬೇಕು ಎಂದು ಗೊತ್ತಿದೆ. ಎಷ್ಟು ಮಂದಿ ಕೇಂದ್ರಸ್ಥಾನದಲ್ಲಿ ಮನೆ ಮಾಡಿದ್ದೀರಿ, ಇನ್ನು ಮುಂದೆ ಕೇಂದ್ರ ಸ್ಥಾನದಲ್ಲಿ ಇದ್ದು ಕೆಲಸ ಮಾಡಬೇಕು. ಕೇಂದ್ರ ಸ್ಥಾನ ಬಿಟ್ಟು ಹೋದರೆ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ಕೊಡಬೇಕು. ಗ್ರಾಪಂ ನಿಂದ ಜಿಲ್ಲಾಮಟ್ಟದ ಅಧಿಕಾರಿವರೆಗೆ ಎಲ್ಲರೂ ಕೇಂದ್ರಸ್ಥಾನದಲ್ಲೇ ಉಳಿದುಕೊಂಡು ಕೆಲಸ ಮಾಡಬೇಕು ಎಂದರು.
ಎಲ್ಲಾ ಅಧಿಕಾರಿಗಳ ಫೋನ್ ನಂಬರ್, ವಿಳಾಸದ ಡೈರಿ ಮಾಡಿ, ಅವರ ಫೋಟೋ ಸಮೇತ ಪುಸ್ತಕ ಮಾಡಿ. ಕಚೇರಿಗೆ ಬಂದು ಹೋಗುವವರ ಬಗ್ಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ. ಸರ್ಕಾರಿ ಯೋಜನೆಗಳನ್ನು ಸರಿಯಾಗಿ ಜನರಿಗೆ ತಲುಪಿಸಿ. ಭ್ರಷ್ಟಾಚಾರದ ವಿರುದ್ಧ ಮಾಹಿತಿ ನೀಡಲು ಬೋರ್ಡ್ ಹಾಕಿಸಿ. ಕೆಲವರು ಆರ್ಟಿಇ ಕಾರ್ಯಕರ್ತರ ಹೆಸರಲ್ಲಿ ವಂಚಕರು ಸೇರಿದ್ದಾರೆ. ಅವರಿಗೆ ಹೆದರುವ ಅವಶ್ಯಕತೆ ಇಲ್ಲ. ಯಾವುದೇ ಖಾಸಗಿ ಕ್ಲಬ್ ಇರಬಾರದು. ಗಾಂಜಾ, ರೇವಾ ಪಾರ್ಟಿ ಯಾವುದಕ್ಕೂ ಜಿಲ್ಲೆಯಲ್ಲಿ ಅವಕಾಶವಿಲ್ಲ. ಕಾನೂನು ಸುವ್ಯವಸ್ಥೆ ಕಡೆ ಪೊಲೀಸರು ಗಮನಹರಿಸಬೇಕು ಎಂದು ತಿಳಿಸಿದರು.
ಬೆಂಗಳೂರಿಂದ ತ್ಯಾಜ್ಯ ತಂದು ರಸ್ತೆಗಳ ಪಕ್ಕ ಸುರಿಯುತ್ತಿದ್ದಾರೆ. ಅಲ್ಲಿಗೆ ಕ್ಯಾಮರಾ ಹಾಕಿ. ಬೇಕಾಬಿಟ್ಟಿ ತ್ಯಾಜ್ಯ ನಿರ್ವಹಣೆಗೆ ಕಡಿವಾಣ ಹಾಕಿ. ಮುಖ್ಯವಾಗಿ ಬೆಂಗಳೂರಿನಿಂದ ಪ್ರವೆಶ ಪಡೆಯುವ ರಾಮನಗರ, ಕನಕಪುರ, ಮಾಗಡಿ ರಸ್ತೆಗಳಿಗೆ ಕ್ಯಾಮರಾ ಹಾಕಿ. ಇದರಿಂದ ಅಪರಾಧ ಚಟುವಟಿಕೆ ತಡೆಗೂ ಸಹಕಾರಿಯಾಗುತ್ತದೆ ಎಂದರು.
ನಮ್ಮ ಸರಕಾರದ 5 ಗ್ಯಾರಂಟಿ ಯೋಜನೆಗಳ ಭ್ರಷ್ಟಾಚಾರ ರಹಿತ ಅನುಷ್ಠಾನಕ್ಕೆ ಆದ್ಯತೆ ಕೊಡಬೇಕು. ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಜಿರೋ ಟಿಕೇಟ್ ಲೆಕ್ಕ ಇಡಿ. ಗೃಹ ಜ್ಯೋತಿ ನೊಂದಣಿಗೆ ಯಾವುದೇ ಭ್ರಷ್ಟಾಚಾರ ಆಗದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಗೃಹಲಕ್ಷ್ಮಿ ಆಪ್ ಸಿದ್ಧ ಮಾಡಿದ್ದೇವೆ. ಯೋಜನೆ ಜಾರಿ ದಿನಾಂಕ ನಾಳೆ ನಿರ್ಧಾರ ಆಗಲಿದೆ. ಪ್ರಜಾಪ್ರತಿನಿಧಿ ಸ್ವಯಂ ಸೇವಕರು ಜನರಿಗೆ ಸಹಾಯ ಮಾಡಬೇಕು. ಎಲ್ಲವೂ ಉಚಿತ. ಗ್ರಾಮ್ ಒನ್ ನಲ್ಲಿ ಯಾರಾದರೂ ಲಂಚ ಕೇಳಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು.
ಯಾವುದೇ ಕಾಮಗಾರಿ ಪ್ರಾರಂಭಕ್ಕೂ ಮುನ್ನಾ ಹಾಗೂ ಮುಗಿದ ನಂತರ ವಿಡಿಯೋ, ಪೋಟೋ ತೆಗೆಯಬೇಕು. ಕೆಲಸ ಪ್ರಗತಿ ಪ್ರತಿ ಹಂತದ ವಿಡಿಯೋ, ಫೋಟೋ ಇರಬೇಕು. ಕಳ್ಳಬಿಲ್ಲು, ಎರಡು ಬಾರಿ ಬಿಲ್ ಮಾಡುವುದಕ್ಕೆ ಆಸ್ಪದ ಇಲ್ಲದಂತೆ ಎಚ್ಚರ ವಹಿಸಿ. ಎರಡು ಇಲಾಖೆ, ಎರಡು ಬಿಲ್ ಸೃಷ್ಟಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ರಸ್ತೆ ಮ್ಯಾಪಿಂಗ್ ಮಾಡಿ. ಯಾವ ಇಲಾಖೆ ಅನುದಾನ, ಎಂಎಲ್ಎ, ಎಂಪಿ ಅನುದಾನದ ಬಗ್ಗೆ ವಿವರ ಇಡಿ. ರಾಮನಗರ ಮಳೆ ನೀರು ಪ್ರವಾಹದಿಂದ ಅಪಾರ ನಷ್ಟ ಆಯಿತು. ರಸ್ತೆ, ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿ. ಪರಿಸರ ಯೋಜನೆಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಿ. ಸ್ಕೂಲ್ ಗಳ ಜತೆ ಒಪ್ಪಂದ ಮಾಡಿಕೊಳ್ಳಿ ಎಂದು ತಿಳಿಸಿದರು.
ಪಾದಚಾರಿಗಳು ಓಡಾಡಲು ಅವಕಾಶ ಮಾಡಿಕೊಡಬೇಕು ಪಾದಚಾರಿ ರಸ್ತೆಗಳಲ್ಲಿ ಇರುವ ಅಂಗಡಿಗಳನ್ನು ತೆರವುಗೊಳಿಸಿ ರಸ್ತೆಯಲ್ಲಿ ಬೆಳೆಗಳ ಕಣ ಮಾಡಲು ಅವಕಾಶ ಕೊಡಬೇಡಿ. ಟ್ರಾಕ್ಟರ್ ಗಳಿಗೆ ಡ್ರೈವಿಂಗ್ ಲೈಸೆನ್ಸ್, ಇನ್ಸೂರೆನ್ಸ್ ಕಡ್ಡಾಯ ಇರಬೇಕು. ಇದಕ್ಕೆ 100 ದಿನಗಳ ಗಡುವು. ಹೋಬಳಿವಾರು ಅಭಿಯಾನ ಮಾಡಿ. ಈ ಬಗ್ಗೆ ಕರಪತ್ರ ಹಂಚಿ ಪ್ರಚಾರ ಮಾಡಿ ಎಂದರು.
ಗೃಹ ಜ್ಯೋತಿ ಯೋಜನೆ ಬಗ್ಗೆ ಅರಿವು ಮೂಡಿಸಿ. ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕು.ಯೋಜನೆ ಪ್ರಾರಂಭಕ್ಕೆ ಮುಂಚೆ ಎಲ್ಲಾ ಮಾಹಿತಿ ಪಡೆದಿದ್ದೇನೆ.. ಜಿಲ್ಲೆಯಲ್ಲಿ 2000 ಮನೆಗಳು ಮಾತ್ರ ಬಿಲ್ ಕಟ್ಟುವ ವ್ಯಾಪ್ತಿಗೆ ಬರುತ್ತವೆ. ಉಳಿದವರಿಗೆ ಯೋಜನೆ ಸೌಲಭ್ಯ ಸಿಗಬೇಕು.
ಎರಡು-ಮೂರು ಪಂಚಾಯ್ತಿಗೆ ಒಂದು ನವೋದಯ, ಪಬ್ಲಿಕ್ ಸ್ಕೂಲ್ ಮಾದರಿಯಲ್ಲಿ ಸ್ಕೂಲ್ ಮಾಡಬೇಕು. ಇಡೀ ರಾಜ್ಯಕ್ಕೆ ಈ ಯೋಜನೆ ಅನ್ವಯ. ಇದರಿಂದ ಜನ ನಗರ ಪ್ರದೇಶಕ್ಕೆ ವಲಸೆ ಬರೋದು ತಪ್ಪಿಸಬೇಕು.
ಸರಕಾರಿ ಆಸ್ತಿ ಒತ್ತುವರಿ ಮಾಡಿರೋ ಬಗ್ಗೆ ಪಟ್ಟಿ ಮಾಡಬೇಕು. ಬಂದಿರೋ ಅನುದಾನ, ಆಗಿರೋ ಕೆಲಸದ ಬಗ್ಗೆ ವಿವರ ಕೊಡಬೇಕು. ಕುಡಿಯುವ ನೀರು ಪೂರೈಕೆ ಯೋಜನೆಗಳ ಬಗ್ಗೆ ವರದಿ ಕೊಡಬೇಕು. ನೀರಾವರಿ ಯೋಜನೆಗಳ ಪ್ರಗತಿ ಬಗ್ಗೆ ವಿವರ ಕೊಡಿ. ರಸ್ತೆ ಕೆಲಸ ಗುಣಮಟ್ಟ, ಪ್ರಗತಿ, ಅನುದಾನ ಬಿಡುಗಡೆ ಮತ್ತಿತರ ವಿವರ ಬೇಕು ಎಂದರು.
ಪ್ರತಿವಾರ ಅಪರ ಜಿಲ್ಲಾಧಿಕಾರಿಗಳು, ಉಪ ಪೊಲೀಸ್ ವರಿಷ್ಠಾಧಿಕಾರಿ, ಉಪ ವಿಭಾಗಾಧಿಕಾರಿಗಳು ಎರಡು ಅಥವಾ ಮೂರು ಪಂಚಾಯಿತಿಗಳು ಸೇರಿಸಿ ಕಂದಾಯ ಅದಾಲತ್ ಮಾಡಬೇಕು ಇಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.
ಸಾರಿಗೆ, ಮುಜರಾಯಿ ಸಚಿವರು ಹಾಗೂ ರಾಮನಗರ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಮಾತನಾಡಿ, ಅಧಿಕಾರಿಗಳು ರೈತರ ಸಮಸ್ಯೆಗಳನ್ನು ತಡಮಾಡದೇ ಶೀಘ್ರವಾಗಿ ಬಗೆಹರಿಸಿ, ರೈತರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ. ಪಿಂಚಣಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸುವಂತೆ ತಿಳಿಸಿದರು.
ಪಿಂಚಣಿದಾರರು ಪಿಂಚಣಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿದ್ದಲ್ಲಿ ಹೋಬಳಿ ಮಟ್ಟದಲ್ಲಿ ತಹಶೀಲ್ದಾರರು ಹಾಗೂ ಉಪವಿಭಾಗಾಧಿಕಾರಿಗಳು ಕ್ಯಾಂಪ್ಗಳನ್ನು ಮಾಡಿ ಅರ್ಹ ಪಿಂಚಣಿದಾರರುಗಳನ್ನು ಗುರುತಿಸಿ ಶೀಘ್ರವಾಗಿ ಪಿಂಚಣಿ ತಲುಪಿಸುವ ವ್ಯವಸ್ಥೆ ಮಾಡಬೇಕು ಹಾಗೂ ಪಡಿತರ ಚೀಟಿದಾರರು ಸಹ ಅರ್ಜಿ ಸಲ್ಲಿಸಿದ್ದಲ್ಲಿ ಅವರಿಗೂ ಶೀಘ್ರವಾಗಿ ಪಡಿತರ ಚೀಟಿ ನೀಡಲು ಕ್ರಮವಹಿಸುವಂತೆ ತಿಳಿಸಿದರು.
ಜಿಲ್ಲೆಯ ಮಾಗಡಿ ಹಾಗೂ ಬಿಡದಿ ಪುರಸಭೆ ವ್ಯಾಪ್ತಿಗೆ ಬರುವ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಕಂಡುಬಂದಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ಸಮಸ್ಯೆ ಬಗೆಹರಿಸುವಂತೆ ತಿಳಿಸಿದರು. ರಸ್ತೆಬದಿಯ ಕಸ ವಿಲೇವಾರಿ ಸಮಸ್ಯೆಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆಯ ಅಧಿಕಾರಿಗಳು ಕಸ ವಿಲೇವಾರಿ ಮಾಡಿಸುವಂತೆ ತಿಳಿಸಿದರು. ವಿದ್ಯುತ್, ಇ-ಖಾತೆ ಸಮಸ್ಯೆಗಳ ಕುರಿತು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುವಂತೆ ತಿಳಿಸಿದರು.
ರಾಮನಗರ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ, ಅಗತ್ಯವಿರುವ ಔಷಧಿಗಳನ್ನು ಖರೀದಿಸಿ ಉತ್ತಮ ಚಿಕಿತ್ಸೆ ನೀಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದಾಗಿ ಅಪಾರ ಬೆಳೆಗಳು ನಷ್ಟವಾಗಿದೆ ಹಾಗೂ ಮೂರು ಜನ ಕಾಡಾನೆ ದಾಳಿಯಿಂದ ಮೃತಪಟ್ಟಿರುತ್ತಾರೆ. ಅವರಿಗೆ ಪರಿಹಾರ ನೀಡುವುದು ಮುಖ್ಯವಲ್ಲ ಕಾಡಾನೆಗಳು ಅರಣ್ಯ ಬಿಟ್ಟು ಬರುವುದನ್ನು ತಪ್ಪಿಸಲು ಅರಣ್ಯ ಇಲಾಖೆ ವತಿಯಿಂದ ಕಾಡುಗಳಲ್ಲಿ ಆಹಾರ ಮತ್ತು ನೀರು ಸಿಗುವಂತೆ ಕ್ರಮವಹಿಸಿ, ಆನೆಗಳು ನಗರಗಳಿಗೆ ಬರುವುದನ್ನು ತಪ್ಪಿಸಿ ಎಂದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗಾಗಲೇ 200 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುತ್ತಾರೆ. ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸದಂತೆ ರಸ್ತೆಗಳನ್ನು ಸರಿಪಡಿಸಲು ಕೂಡಲೇ ಅಗತ್ಯ ಕ್ರಮವಹಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ರಾಮನಗರವು ಹೆಚ್ಚಾಗಿ ರೇಷ್ಮೆ ಹಾಗೂ ಹಾಲು ಉತ್ಪಾದಿಸುವ ಜಿಲ್ಲೆಯಾಗಿದೆ. ಇದರಿಂದ ಹಲವಾರು ರೈತರು ಜೀವನ ಕಟ್ಟಿಕೊಂಡಿದ್ದಾರೆ. ಈ ಕುರಿತು ಹಾಲು ಹಾಗೂ ರೇಷ್ಮೆಗೆ ಹೆಚ್ಚು ಹೊತ್ತು ನೀಡುವಂತೆ ತಿಳಿಸಿದರು.
ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಇಕ್ಬಾಲ್ ಹುಸೇನ್ ಅವರು ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಮಸ್ಯೆ, ಸೇತುವೆ ಸಮಸ್ಯೆ ಸೇರಿದಂತೆ ರಾಮನಗರ ತಾಲ್ಲೂಕಿನಲ್ಲಿರುವ ಕುಂದುಕೊರತೆಗಳ ಕುರಿತು ಸಭೆಗೆ ವಿವರಿಸಿದರು.
ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ.ಕೆ ಸುರೇಶ್, ವಿಧಾನ ಪರಿಷತ್ ಶಾಸಕರಾದ ಎಸ್. ರವಿ, ಅ. ದೇವೇಗೌಡ, ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಸಿ. ಬಾಲಕೃಷ್ಣ, ಜಿಲ್ಲಾಧಿಕಾರಿಗಳಾದ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.