ಬೆಂಗಳೂರು(Bengaluru): ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಕಂಪನಿಗಳು ಆಟೋರಿಕ್ಷಾಗಳ ಸೇವೆ ಒದಗಿಸುವುದು ಕಾನೂನು ಬಾಹಿರವಾಗಿದ್ದು, ಅದನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಉಬರ್ ಮತ್ತು ಒಲಾ ಕಂಪನಿಗಳಿಗೆ ಸಾರಿಗೆ ಇಲಾಖೆ ನೋಟಿಸ್ ನೀಡಿದೆ.
ಅನ್ ಡಿಮ್ಯಾಂಡ್ ಟ್ರಾನ್ಸ್ ಪೊರ್ಟೇಷನ್ ಟೆಕ್ನಾಲಜಿ ಅಗ್ರಿಗೇಟರ್ಸ್ ನಿಯಮಾವಳಿ–2016ರ ಅಡಿಯಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸಲು ಕಂಪನಿಗಳಿಗೆ ಪರವಾನಗಿ ನೀಡಲಾಗಿದೆ. ಟ್ಯಾಕ್ಸಿ ಎಂದರೆ ಚಾಲಕ ಹೊರತುಪಡಿಸಿ ಆರು ಮಂದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವ ವಾಹನ ಆಗಿರಬಾರದು ಎಂದು ಷರತ್ತು ವಿಧಿಸಲಾಗಿದೆ.
ಅಲ್ಲದೇ ಆಟೋರಿಕ್ಷಾ ಸೇವೆಗಳನ್ನೂ ಈ ಕಂಪನಿಗಳು ಒದಗಿಸುತ್ತಿರುವುದು ಮತ್ತು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಆಟೋರಿಕ್ಷಾ ಸೇವೆಯನ್ನು ಕೂಡಲೇ ನಿಲ್ಲಿಸಬೇಕು ಮತ್ತು ಹೆಚ್ಚಿನ ದರ ಪಡೆಯಬಾರದು ಎಂದು ಸಾರಿಗೆ ಆಯುಕ್ತರು ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಕಾನೂನು ಬಾಹಿರವಾಗಿ ಆಟೋರಿಕ್ಷಾ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ವಿವರಣೆ ಇದ್ದರೆ 3 ದಿನದಲ್ಲಿ ಸಲ್ಲಿಸಬೇಕು, ಇಲ್ಲದಿದ್ದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಒಲಾ, ಉಬರ್ ಸೇರಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಇತ್ತೀಚಿನ ದಿನಗಳಲ್ಲಿ ದುಬಾರಿಯಾಗಿದ್ದು, ಆಟೋರಿಕ್ಷಾ ಸೇವೆಗೆ ಕನಿಷ್ಠ ದರ ₹100 ನಿಗದಿ ಮಾಡಲಾಗಿತ್ತು. ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿತ್ತು.