ಧಾರವಾಡ(Dharawad): ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪೀಠ ವಜಾಗೊಳಿಸಿದೆ.
ಗಲಭೆ ಸಂಬಂಧ ಪೊಲೀಸರು 12 ಎಫ್ಐಆರ್ ದಾಖಲಿಸಿದ್ದರು. ಆದರೆ, ಈ ಪೈಕಿ 11 ಎಫ್ಐಆರ್ ರದ್ದುಪಡಿಸಿ ಎಂದು ಆರೋಪಿಗಳ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಬಗ್ಗೆ ಮೇ 17 ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, 11 ಎಫ್ಐಆರ್ಗಳಿಗೆ ಮಧ್ಯಂತರ ತಡೆ ನೀಡಿತ್ತು. ಬಳಿಕ ಪೊಲೀಸರು, ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಸೋಮವಾರ ಪೊಲೀಸರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತಡೆಯಾಜ್ಞೆ ತೆರವುಗೊಳಿಸಿದೆ. ಜೊತೆಗೆ ಆರೋಪಿಗಳ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.ಏ. 16 ರಂದು ಹಳೇ ಹುಬ್ಬಳ್ಳಿ ಠಾಣೆ ಎದುರು ನಡೆದ ದೊಡ್ಡ ಗಲಭೆ ಸಂಬಂಧ 158 ಜನರ ಮೇಲೆ ಒಟ್ಟು 12 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದರು. 158 ಆರೋಪಿಗಳನ್ನು ಬಂಧಿಸಿ, ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಕಳಿಸಿದ್ದರು. 12 ಪ್ರಕರಣಗಳ ಪೈಕಿ 11 ಎಫ್ಐಆರ್ ವಿರುದ್ಧ ಆರೋಪಿಗಳ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು.