ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ (ಸಿಎಪಿಎಫ್) ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಅನ್ವಯಿಸುತ್ತದೆ ಎಂದು ದೆಹಲಿ ಹೈಕೋರ್ಟ್ ಕೆಲ ತಿಂಗಳುಗಳ ಹಿಂದೆ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಈಚೆಗೆ ತಡೆ ನೀಡಿದೆ.
ಕೇಂದ್ರ ಸರ್ಕಾರ ಸಲ್ಲಿಸಿದ ಮೇಲ್ಮನವಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ್ದು ಪ್ರಕರಣವನ್ನು ಫೆಬ್ರವರಿ 2024ಕ್ಕೆ ಮುಂದೂಡಿದೆ.
ಇದೇ ವೇಳೆ 2004ರ ಮೊದಲು ನೀಡಲಾದ ನೇಮಕಾತಿ ಪ್ರಕಟಣೆಗಳ ಆಧಾರದ ಮೇಲೆ ಸೇವೆಗೆ ಸೇರಿದ ಸರ್ಕಾರಿ ನೌಕರರು ಇತ್ತೀಚಿನ ಇಲಾಖಾ ಜ್ಞಾಪನ ಪತ್ರದ ಪ್ರಕಾರ ಒಪಿಎಸ್ ಸೌಲಭ್ಯ ಪಡೆಯಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅರೆ ಸೇನಾಪಡೆ ಕೂಡ ಸಶಸ್ತ್ರ ಪಡೆಯಾಗಿದ್ದು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಿಗೆ ನೀಡಲಾದ ಹಳೆ ಪಿಂಚಣಿ ಸೌಲಭ್ಯ ಈ ಯೋಧರಿಗೂ ಅನ್ವಯಿಸುತ್ತದೆ ಎಂದು ದೆಹಲಿ ಹೈಕೋರ್ಟ್ ಜನವರಿಯಲ್ಲಿ ತೀರ್ಪು ನೀಡಿತ್ತು.
ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಗಡಿ ಭದ್ರತಾ ಪಡೆ (ಬಿಎಸ್ ಎಫ್) ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್‌ಗಳು (ಐಟಿಬಿಪಿ) ಕೇಂದ್ರ ಸಶಸ್ತ್ರ ಪಡೆ (ಸಿಎಪಿಎಫ್) ವ್ಯಾಪ್ತಿಗೆ ಬರುತ್ತವೆ.
ಅರೆ ಸೇನಾಪಡೆಗಳ ಸಿಬ್ಬಂದಿಗೆ ಒಪಿಎಸ್ ಪ್ರಯೋಜನಗಳನ್ನು ನಿರಾಕರಿಸುವ ಸರ್ಕಾರಿ ಆದೇಶ ಮತ್ತು ಅಧಿಕಾರಿ ಜ್ಞಾಪನಾಪತ್ರಗಳನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿತ್ತು.