ಮಂಗಳೂರು: ರಾಜ್ ಬಿ. ಶೆಟ್ಟಿ ಅವರ ನೇತೃತ್ವದಲ್ಲಿ “ಟೋಬಿ’ ಕನ್ನಡ ಸಿನೆಮಾ ಆ. 25ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಇಲ್ಲೂ ಟ್ರೇಲರ್ ನಲ್ಲಿ ನಾನು ಲುಂಗಿ ಉಟ್ಟಿರುವುದರಿಂದ ಜಿಜಿವಿವಿ ಚಿತ್ರದ ಛಾಯೆ ಇದರಲ್ಲಿ ಕಂಡಿರಬಹುದು. ಜಿಜಿವಿವಿ ನಮ್ಮ ಹೊಸ ಪ್ರಯತ್ನವಾದ್ದರಿಂದ ಜನರನ್ನು ಸೆಳೆಯಲು ಟ್ರೇಲರ್ ನಲ್ಲಿ ಚಿತ್ರದ ಮುಖ್ಯಾಂಶಗಳನ್ನು ಹಾಕಿದ್ದೆವು, ಆದರೆ “ಟೋಬಿ’ ಟ್ರೇಲರ್ ನಲ್ಲಿ ಚಿತ್ರದ ಯಾವುದೇ ಕಥೆಯ ಸುಳಿವು ಕೂಡ ಕೊಟ್ಟಿಲ್ಲ. ಹಾಗಾಗಿ ಇದಕ್ಕೂ ಜಿಜಿವಿವಿಗೂ ಯಾವುದೇ ಲಿಂಕ್ ಇರುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ರಾಜ್ ಬಿ. ಶೆಟ್ಟಿ ಸ್ಪಷ್ಟಪಡಿಸಿದರು.
ಜಿಜಿವಿವಿಗೆ ಹೋಲಿಸಿದರೆ ಟೋಬಿ ಹತ್ತು ಪಟ್ಟು ಹೆಚ್ಚು ಪ್ರಯತ್ನ, ವೆಚ್ಚ, ಶ್ರಮ ಹಾಕಿರುವ ಚಿತ್ರ. ಜಿಜಿವಿವಿಯಲ್ಲಿ ಹರಿ, ಶಿವ ಇಬ್ಬರೂ ಕುಟುಂಬದಿಂದ ವಿಮುಖರಾದವರು, ಟೋಬಿಹಾಗಿಲ್ಲ, ಇದು ಕೌಟುಂಬಿಕ ಬಾಂಧವ್ಯ ಇರುವ ಚಿತ್ರ ಎರಡೂ ಬೇರೆಯೇ ಆಗಿವೆ ಎಂದರು.
ಟೋಬಿಯನ್ನು ನಮ್ಮ ಜನರಿಗೆ ತಲಪಿಸಬೇಕು ಎಂಬ ಬಯಕೆ ಹೊಂದಿದ್ದೇವೆ, ಟ್ರೇಲರ್ ನೋಡಿದವರು, ತೆಲುಗು ತಮಿಳು ಚಿತ್ರ ವಿತರಕರು ಆ ಭಾಷೆಗಳಿಗೂ ಡಬ್ ಮಾಡಬೇಕು ಎಂದು ಕೇಳಿ ದ್ದಾರೆ, ನಮ್ಮ ಜನರ ಸ್ಪಂದನೆ ನೋಡಿಕೊಂಡು ಮುಂದಿನ ಕೆಲಸ ಮಾಡು ತ್ತೇವೆ ಎಂದರು.
ನಿರ್ಮಾಪಕ ರವಿ ರೈ ಕಳಸ ಮಾತನಾಡಿ, ಜಿಜಿವಿವಿ ಮೆಚ್ಚಿಕೊಂಡವರು ಟೋಬಿಯನ್ನು ಮೆಚ್ಚಿ ಕೊಳ್ಳುವುದರಲ್ಲಿ ಸಂದೇಹವಿಲ್ಲ ಎಂದರು.
ನಟರಾದ ರಾಜ್ ದೀಪಕ್ ರೈ, ಯತೀಶ್ ಬೈಕಂಪಾಡಿ, ನಟಿ ಚೈತ್ರಾ ಆಚಾರ್ ಮಾತನಾಡಿದರು.
ಬಾಸಿಲ್ ಅಲ್ಚಾಲಕ್ಕಲ್ ನಿರ್ದೇ ಶನವಿರುವ ಚಿತ್ರಕ್ಕೆ ಮಿಧುನ್ ಮುಕುಂದನ್ ಹಿನ್ನೆಲೆ ಸಂಗೀತ, ಪ್ರವೀಣ್ ಶ್ರೀಯಾನ್ ಛಾಯಾಚಿತ್ರ ಗ್ರಹಣವಿದೆ. ಸಂಯುಕ್ತ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ.