ಮನೆ ಮನರಂಜನೆ ಜ.26ರಂದು ರಾಜ್ಯಾದ್ಯಂತ “ಬ್ಯಾಚುಲರ್‌ ಪಾರ್ಟಿ’ ಸಿನಿಮಾ ಬಿಡುಗಡೆ

ಜ.26ರಂದು ರಾಜ್ಯಾದ್ಯಂತ “ಬ್ಯಾಚುಲರ್‌ ಪಾರ್ಟಿ’ ಸಿನಿಮಾ ಬಿಡುಗಡೆ

0

ರಕ್ಷಿತ್‌ ಶೆಟ್ಟಿ ಬ್ಯಾನರ್‌ ಅಡಿಯಲ್ಲಿ “ಬ್ಯಾಚುಲರ್‌ ಪಾರ್ಟಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

“ಬ್ಯಾಚುಲರ್‌ ಪಾರ್ಟಿ’ ಸಿನಿಮಾದಲ್ಲಿ ದಿಗಂತ್‌, ಯೋಗಿ ಹಾಗೂ ಅಚ್ಯುತ್‌ ಕುಮಾರ್‌ ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿದ್ದು, ರಕ್ಷಿತ್‌ ಶೆಟ್ಟಿ ಅವರ “ಕಿರಿಕ್‌ ಪಾರ್ಟಿ’ ಸೇರಿದಂತೆ ಹಲವಾರು ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿರುವ ಅಭಿಜಿತ್‌ ಮಹೇಶ್‌ ಈ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

ಇತ್ತೀಚೆಗಷ್ಟೇ ಹರಿಬಿಟ್ಟರುವ “ಬ್ಯಾಚುಲರ್‌ ಪಾರ್ಟಿ’ ಸಿನಿಮಾದ ಪೋಸ್ಟರ್‌, ಹಾಡು ಹಾಗೂ ಟೀಸರ್‌ಗಳು ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಇದೇ ಖುಷಿಯಲ್ಲಿರುವ ಚಿತ್ರತಂಡ ಶೀಘ್ರದಲ್ಲೇ “ಬ್ಯಾಚುಲರ್‌ ಪಾರ್ಟಿ’ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡುವ ಆಲೋಚನೆಯಲ್ಲಿದೆ.

ಇನ್ನೊಂದು ವಿಶೇಷವೆಂದರೆ, “ಬ್ಯಾಚುಲರ್‌ ಪಾರ್ಟಿ’ ಸಿನಿಮಾದಲ್ಲಿ ಅನೇಕ ಖ್ಯಾತನಾಮ ಕಲಾವಿದರು ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ನಿರ್ದೇಶಕ ಅಭಿಜಿತ್‌ ಮಹೇಶ್‌, “ಬ್ಯಾಚುಲರ್‌ ಪಾರ್ಟಿ’ ಸಿನಿಮಾದಲ್ಲಿ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿರುವ ಕಲಾವಿದರ ಮಾಹಿತಿ ಹಂಚಿಕೊಂಡಿದ್ದಾರೆ. ಲೂಸಿಯಾ ಪವನ್‌ ಕುಮಾರ್‌, ಮಠ ಗುರುಪ್ರಸಾದ್‌, ನಾ. ಸೋಮೇಶ್ವರ (ಥಟ್‌ ಅಂತ ಹೇಳಿ), ಶೈನ್‌ ಶೆಟ್ಟಿ ಹಾಗೂ ವಿಕ್ಕಿಪೀಡಿಯಾ ಖ್ಯಾತಿಯ ವಿಕಾಸ್‌ ಸೇರಿದಂತೆ ಇನ್ನೂ ಹಲವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಪಟ್ಟಿ ನೀಡಿರುವ ಚಿತ್ರತಂಡ ಇವರೆಲ್ಲ “ಬ್ಯಾಚುಲರ್‌’ಗಳ ಜತೆ ಏನೇನು ಚಮತ್ಕಾರ ಮಾಡಲಿದ್ದಾರೆ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

 “ಯೂಥ್‌ಫ‌ುಲ್‌ ಕಂಟೆಂಟ್‌ ಹೊಂದಿರುವ “ಬ್ಯಾಚುಲರ್‌ ಪಾರ್ಟಿ’ ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳಿವೆ. ಪ್ರಮುಖ ಪಾತ್ರಗಳ ಜತೆಗೆ ಅತಿಥಿ ಪಾತ್ರಗಳಿಗೂ ಪ್ರಾಮುಖ್ಯತೆ ನೀಡಲಾಗಿದ್ದು, ಅದೇನು ಎಂಬುದರ ಬಗ್ಗೆ ಸದ್ಯದಲ್ಲೇ ಹರಿಬಿಡುವ ಟ್ರೇಲರ್‌ ಮೂಲಕ ಬಹಿರಂಗಪಡಿಸುವ ಆಲೋಚನೆಯಲ್ಲಿದ್ದೇವೆ’ ಎಂಬುದು ಚಿತ್ರತಂಡದ ಮಾತು.

ಬ್ಯಾಂಕಾಕ್‌ ಸೇರಿದಂತೆ ಕಣ್ಮನ ಸೆಳೆಯುವ ಸ್ಥಳಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಥಿಯೇಟರ್‌ನಲ್ಲಿ ಕೂತವರನ್ನು ನಗೆಗಡಲಲ್ಲಿ ತೇಲಿಸುವ ಸಿನಿಮಾ ಇದಾಗಿದೆ ಎಂಬ ವಿಶ್ವಾಸದ ಮಾತುಗಳನ್ನಾಡುತ್ತದೆ.

 “ಪರಂವಃ ಸ್ಟೂಡಿಯೋಸ್‌’ ಬ್ಯಾನರ್‌ನಲ್ಲಿ ರಕ್ಷಿತ್‌ ಶೆಟ್ಟಿ ಹಾಗೂ ಅಮಿತ್‌ ಗುಪ್ತ ಜಂಟಿಯಾಗಿ ನಿರ್ಮಿಸಿರುವ “ಬ್ಯಾಚುಲರ್‌ ಪಾರ್ಟಿ’ ಸಿನಿಮಾಕ್ಕೆ ಅರವಿಂದ್‌ ಛಾಯಾಗ್ರಹಣ, ಅರ್ಜುನ್‌ ರಾಮು ಸಂಗೀತ ನಿರ್ದೇಶನವಿದೆ. ಸದ್ಯ ಭರದಿಂದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ “ಬ್ಯಾಚುಲರ್‌ ಪಾರ್ಟಿ’ ಸಿನಿಮಾ ಇದೇ ಜನವರಿ 26ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಹಿಂದಿನ ಲೇಖನತಾನು ಆತ್ಮಹತ್ಯೆಗೆ ಪ್ರಯತ್ನಿಸಲು ಪತಿ ಕಾರಣ ಎಂದು ಪತ್ನಿ ಆರೋಪಿಸುವುದು ಕ್ರೌರ್ಯ: ದೆಹಲಿ ಹೈಕೋರ್ಟ್
ಮುಂದಿನ ಲೇಖನ4 ಕೋಟಿ 30 ಲಕ್ಷ ಕನ್ನಡಿಗರಿಗೆ ಸರ್ಕಾರದ ಗ್ಯಾರಂಟಿಯ ಫಲ ಪ್ರತೀ ದಿನ-ಪ್ರತೀ ತಿಂಗಳು ತಲುಪುತ್ತಿದೆ. ಈ ಫಲಾನುಭವಿಗಳಲ್ಲಿ BJPಯವರೇ ಹೆಚ್ಚಿದ್ದಾರೆ: ಸಿಎಂ ಸಿದ್ದರಾಮಯ್ಯ