ಔಷಧೀಯ ಗುಣಗಳು
೧ ಕಾಮಾಲೆಗೆ ನೆಲನಲ್ಲಿ ಅತ್ಯುತ್ತಮ ಔಷಧಿ. ಸಿದ್ದ ವೈದ್ಯ ಪದ್ಧತಿಯಲ್ಲಿ ನೆಲನೆಲ್ಲಿಯನ್ನು ದಶಕಗಳ ಕಾಲದಿಂದಲೂ ಔಷಧಿಯಾಗಿ ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿರುವ ಕಾಮಾಲೆ ನಿವಾರಕ ಔಷಧಿ (ಸಿರಪ್ ಮತ್ತು ಮಾತ್ರೆ)ಗಳಲ್ಲಿ ಬಹುತೇಕ ನೆಲನೆಲ್ಲಿ ಇದ್ದೇ ಇರುತ್ತದೆ. ಯುನಾನಿ ವೈದ್ಯಪದ್ಧತಿಯಲ್ಲಿ ಗಾಯ, ಕಜ್ಜಿ ಮತ್ತು ಜಂತುಹುಳುಗಳ ನಿವಾರಣೆಗೆ ನೆಲನೆಲ್ಲಿಯನ್ನು ಬಳಸಲಾಗುತ್ತದೆ.
ಕಾಮಾಲೆಯಿಂದ ಬಳಲುವವರಿಗೆ ನೆಲನೆಲ್ಲಿಯ ಗಿಡವನ್ನು ಜಜ್ಜಿ ರಸ ತೆಗೆದು ಬೆಳಗ್ಗೆ ಖಾಲಿಹೊಟ್ಟೆಗೆ ಐದು ಚಮಚೆ ರಸ ಕುಡಿಸಬೇಕು. ತಾಜಾಗಿಡ ಸಿಗದಿದ್ದಾಗ ಬೇರನ್ನು ಇಲ್ಲವೇ ಒಣಗಿಸಿದ ಎಲೆಯನ್ನು ಪುಡಿ ಮಾಡಿ ಹಾಲಿನಲ್ಲಿ ಬೆರೆಸಿ ದಿನಕ್ಕೆರಡು ಬಾರಿ ಕುಡಿಸಬೇಕು. ಅಲ್ಲದೇ ಆಹಾರದಲ್ಲಿಯೂ ನೆಲನೆಲ್ಲಿ ಸೊಪ್ಪನ್ನು ಬೇಯಿಸಿ ತಿನ್ನಿಸಬೇಕು.
★ ಭೇದಿಯಾಗುತ್ತಿದ್ದಲ್ಲಿ ನೆಲನೆಲ್ಲಿಯ ಎಳೆಯ ಕಾಂಡವನ್ನು ಜಜ್ಜಿ ರಸ ತೆಗೆದು ನಾಲ್ಕು ಗಂಟೆಗಳಿಗೊಂದು ಬಾರಿ ಕುಡಿಯಬೇಕು ಇಲ್ಲವೇ ಹಾಗೆಯೇ ತಿನ್ನಬಹುದು.
★ ಗಾಯಗಳಾಗಿದ್ದಲ್ಲಿ ನೆಲನೆಲ್ಲಿಯ ಗಿಡವನ್ನು ಬೇರು ಸಹಿತ ಜಜ್ಜಿ ಲೇಪಿಸಬೇಕು.
★ ಚರ್ಮರೋಗಗಳಲ್ಲಿ ನೆಲನೆಲ್ಲಿಯ ಎಲೆಗಳನ್ನು ಉಪ್ಪಿನೊಂದಿಗೆ ಅರೆದು ಲೇಪಿಸುವುದರಿಂದ ನವೆ ಕಡಿಮೆಯಾಗುತ್ತದೆ.
★ ನೆಲನೆಲ್ಲಿ ಮಧುಮೇಹದಲ್ಲಿ ಪರಿಣಾಮಕಾರಿ ಔಷಧಿಯಾಗಿದೆ ಮಧುಮೇಹಿಗಳು (ಸಕ್ಕರೆ ಕಾಯಿಲೆಯವರು) ಪ್ರತಿದಿನ ಬೆಳಗ್ಗೆ ನೆಲನೆಲ್ಲಿಯ ರಸವನ್ನು ಎರಡರಿಂದ ಮೂರು ಚಮಚೆಯಷ್ಟನ್ನು ಖಾಲಿಹೊಟ್ಟೆಗೆ ಸೇವಿಸಬೇಕು. ಇಲ್ಲವೇ ನೆಲನೆಲ್ಲಿಯ ಹಸಿ ಎಲೆಗಳನ್ನು ಹಾಗೆಯೇ ಅಗಿದು ತಿನ್ನಬಹುದು.
★ಈ ನೆಲನೆಲ್ಲಿಯು ಕುಷ್ಠ, ಆಸ್ತಮಾ, ಬಿಕ್ಕಳಿಕೆ ನಿವಾರಣೆಯಲ್ಲಿಯೂ ಉಪಯುಕ್ತ ಔಷಧಿ ಯಾಗಿದೆ.
– ★ ಹೊಟ್ಟೆನೋವು : ಅಜೀರ್ಣದಿಂದ ಹೊಟ್ಟೆನೋವು ಉಂಟಾಗಿದ್ದಲ್ಲಿ ನೆಲನೆಲ್ಲಿ ಸೊಪ್ಪಿನ ಕಷಾಯ ತಯಾರಿಸಿ ಅದಕ್ಕೆ ತುಪ್ಪದಲ್ಲಿ ಹುರಿದ ಹಿಂಗಿನ ಪುಡಿಯನ್ನು ಒಂದು ಚಿಟಿಕೆ ಬೆರೆಸಿ ಕುಡಿಯಬೇಕು.
★ ಅತಿರಕ್ತಸ್ರಾವ : ಮಾಸಿಕಸ್ರಾವದ ಸಮಯದಲ್ಲಿ ಅತಿರಕ್ತಸ್ರಾವವಾಗುತ್ತಿದ್ದಲ್ಲಿ ನೆಲನೆಲ್ಲಿ ಚಟ್ಟಿಯನ್ನು ಆಹಾರದಲ್ಲಿ ಸೇವಿಸುವುದಲ್ಲದೇ ನೆಲನೆಲ್ಲಿ ಕಷಾಯ ತಯಾರಿಸಿ ದಿನಕ್ಕೆ ಮೂರು ಬಾರಿ ಕುಡಿಯಬೇಕು.
★ ಕಣ್ಣು ಕೆಂಪಗಾಗಿದ್ದಲ್ಲಿ : ನೆಲನೆಲ್ಲಿ ಸೊಪ್ಪನ್ನು ಸ್ವಚ್ಛವಾಗಿ ತೊಳೆದು ಜಜ್ಜಿ ರಸವನ್ನು
ಹಿಂಡಿಕೊಳ್ಳಬೇಕು. ಈ ರಸವನ್ನು ತೆಳುವಾದ ಸ್ವಚ್ಛ ಹತ್ತಿ ವಸ್ತ್ರದಲ್ಲಿ ಶೋಧಿಸಿ ನಂತರ ರಸವನ್ನು ಒಂದೆರಡು ಹನಿ ಕಣ್ಣಿನಲ್ಲಿ ಹಾಕಬೇಕು. ಕಣ್ಣಿಗೆ ಹಾಕಬೇಕಾದುದರಿಂದ ಸ್ವಚ್ಛತೆಯ ಬಗ್ಗೆ ಎಚ್ಚರಿಕೆ ಇರಲಿ.
★ ರೋಗನಿರೋಧಕ ಶಕ್ತಿ : ನೆಲನೆಲ್ಲಿಯ ರಸವನ್ನು ಇಲ್ಲವೇ ಕಷಾಯವನ್ನು ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕಾಲರಾ, ಚಿಕುನ್ ಗುನ್ಯಾ,ಡೆಂಗೆಮುಂತಾದ ಕಾಯಿಲೆಗಳು ಹರಡಿದ್ದ ಸಮಯದಲ್ಲಿ ಆರೋಗ್ಯವಂತರು ನೆಲವೆಲ್ಲಿಯ ಕಷಾಯ ಇಲ್ಲವೇ ರಸ ಕುಡಿಯುವುದರಿಂದ ಕಾಯಿಲೆ ಕಾಡದಂತೆ ತಡೆಯಬಹುದು. ಆರೋಗ್ಯಕರ ಜೀವನ ನಡೆಸಬಹುದು.
ಅಡುಗೆ
ನೆಲನೆಲ್ಲಿ ತಂಬುಳಿ : ನೆಲನೆಲ್ಲಿಯನ್ನು ತೊಳೆದು ಸ್ವಚ್ಛಗೊಳಿಸಿಕೊಂಡು ಸ್ವಲ್ಪ ಎಣ್ಣೆಯಲ್ಲಿ ಜೀರಿಗೆಯೊಂದಿಗೆ ಹುರಿದುಕೊಳ್ಳಬೇಕು. ನಂತರ ಅದಕ್ಕೆ ತೆಂಗಿನ ತುರಿ ಸೇರಿಸಿ ನುಣ್ಣಗೆ ಅರೆದುಕೊಳ್ಳಬೇಕು. ನಂತರ ಗಟ್ಟಿ ಮೊಸರು ಇಲ್ಲವೇ ಮಜ್ಜಿಗೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಉಪಯೋಗಿಸಬೇಕು. ಬೇಕೆನಿಸಿದರೆ ಬಗ್ಗರಣೆ ಕೊಡಬಹುದು. ನೆಲನೆಲ್ಲಿದೆ ತಂಬುಳಿಯು ಕಾಮಾಲೆ, ಮಧುಮೇಹಗಳಿಂದ ಬಳಲುವವರಿಗೆ ಉತ್ತಮವಾದುದು.
ನೆಲನೆಲ್ಲಿ ಪಲ್ಯ 1 : ನೆಲನೆಲ್ಲಿಯನ್ನು ತೊಳೆದು ಸ್ವಚ್ಛಗೊಳಿಸಿ ಎಣ್ಣೆಯಲ್ಲಿ ಬಾಡಿಸಿಕೊಳ್ಳ ಬೇಕು. ನಂತರ ಒಗ್ಗರಣೆ ಹಾಕಿ ಸಾಸುವೆ, ಉದ್ದಿನಬೇಳೆ ಹಾಕಿ ಬಾಡಿಸಿದ ಸೊಪ್ಪು ಹಾಕಬೇಕು. ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪುಡಿ ಬೆರೆಸಬೇಕು. ಇದು ಕಾಮಾಲೆಯಿಂದ ಬಳಲುವವರಿಗೆ ಉತ್ತಮವಾದುದು.
ಪಲ್ಯ 2 : ಬೇಳೆ ಬೇಯಿಸಿಟ್ಟುಕೊಂಡಿದ್ದು, ನೆಲನೆಲ್ಲಿಯನ್ನು ಎಣ್ಣೆಯಲ್ಲಿ ಬಾಡಿಸಿ ಬೇಯಿಸಿದ ಬೇಳೆಗೆ ಬೆರೆಸಬೇಕು. ಒಗ್ಗರಣೆಗೆ ಒಂದೆರಡು ಒಣಮೆಣಸಿನಕಾಯಿ, ಉದ್ದಿನಬೇಳೆ, ಸಾಸುವೆ, ಜೀರಿಗೆ ಹಾಕಬೇಕು. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದಲ್ಲಿ ಪಲ್ಯ ಸಿದ್ದ
ಚಟ್ಟಿ : ನೆಲನೆಲ್ಲಿ ಸೊಪ್ಪು ಒಂದು ಹಿಡಿ, ತೆಂಗಿನತುರಿ ಅರ್ಧ ಬಟ್ಟಲು. ಹಸಿಮೆಣಸಿನಕಾಯಿ ಬೇಕೆನಿಸಿದಲ್ಲಿ, ಟೊಮಾಟೊ 1. ಹುರಿಗಡಲೆ ಪುಡಿ 4 ಚಮಚೆ, ಎಣ್ಣೆ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ಸ್ವಚ್ಛಗೊಳಿಸಿದ ನೆಲನಲ್ಲಿ ಸೊಪ್ಪನ್ನು ಎಣ್ಣೆಯಲ್ಲಿ ಬಾಡಿಸಿಕೊಳ್ಳಬೇಕು. ನಂತರ ಅದಕ್ಕೆ ಹಸಿಮೆಣಸಿನಕಾಯಿ, ತೆಂಗಿನತುರಿ, ಹುರಿಗಡಲೆ ಪುಡಿ, ಉಪ್ಪು, ಟೊಮಾಟೋ ಎಲ್ಲವನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಒಗ್ಗರಣೆಗೆ ಉದ್ದಿನಬೇಳೆ, ಸಾಸುವೆ, ಕರಿಬೇವು ಹಾಕಿ ಬೆರೆಸಿದಲ್ಲಿ ರುಚಿಕರ ಚಟ್ಟಿ ತಯಾರು.
ಇತರ ಭಾಷೆಗಳಲ್ಲಿ
ಸಂಸ್ಕೃತ —ಭೂಮ್ಯಾಮಲಕಿ, ಶಿವಾ, ಬಹುಪತ್ರಾ, ಬಹುಫಲಾ, ಭೂಯಿ ಆಂವಲಾ, ತಾಮಲಕಿ
ఉంది.—ಜರಾಮ್ಲ, ಭೂಯಿ ಆಮಲಾ
ಮರಾಠಿ —ಭೂಯಿ ಆಂಬಲಿ, ಭೂಯಿ ಆಂದ್ಲಾ
ತಮಿಳು —ಕಿಝಕಾಯ್ ನಲ್ಲಿ
ತೆಲುಗು —ನೆಲ ಉಸೀರಿಕೆ
ಮಲಯಾಳಂ — ಕಿಳಾನೆಲ್ಲಿ
ವೈಜ್ಞಾನಿಕ ಹೆಸರು
Phyllanthus amaras (sihumach & Thonn)
100/ಮನೆಯಂಗಳದಲ್ಲಿ ಔಷಧಿವನ