ಇದು ಪುರಾಣದಲ್ಲಿ ಬರುವ ಒಂದು ಕಥೆ. ‘ಬಾಲಧಿ’ ಎಂಬ ಒಬ್ಬ ಋಷಿ ಇದ್ದನು. ಅವನ ಮಗನು ಅಕಾಲ ಮರಣಕ್ಕೆ ತುತ್ತಾಗಿ ಸತ್ತು ಹೋದನು. ಇದರಿಂದ ನೊಂದ ಬಾಲಧಿಯು ಕೊನೆಗೊಂದು ನಿರ್ಧಾರಕ್ಕೆ ಬಂದನು. ಸಾವೇ ಇಲ್ಲದ ಮಗನನ್ನು ಪಡೆಯುವುದಕ್ಕಾಗಿ ದೇವರನ್ನು ಸಾಕ್ಷಾತ್ಕರಿಸಲು ಘೋರವಾದ ತಪಸ್ಸಿಗೆ ಕುಳಿತನು. ಕೊನೆಗೆ ಬಾಲಧಿಯ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾದನು. ಬಾಲಧಿಯ ಬಳಿ, “ಏನು ಬೇಕು?” ಎಂದು ಕೇಳಿದಾಗ ಬಾಲಧಿಯು ತನಗೆ ಸಾವೇ ಇಲ್ಲದ ಮಗ ಬೇಕೆಂದು ಕೇಳಿದನು. “ಹುಟ್ಟಿದವರೆಲ್ಲರೂ ಒಂದು ದಿನ ಸಾಯಲೇ ಬೇಕು. ಆದ್ದರಿಂದ ಸಾವೇ ಇಲ್ಲದ ಮಗನನ್ನು ವರವಾಗಿ ಕೊಡಲು ಸಾಧ್ಯವಿಲ್ಲ” ಎಂದ ದೇವರು. ಆಗ ಬಾಲಧಿಯು, “ಇಲ್ಲಿರುವ ಪರ್ವತಗಳು ಇರುವ ತನಕವೂ ಬದುಕಿ ಉಳಿಯುವ ಮಗನನ್ನು ವರವಾಗಿ ಕೊಡು” ಎಂದನು. ದೇವರು, “ಹಾಗೇ ಆಗಲಿ” ಎಂದು ಹರಸಿದನು.
ಕಾಲಾನುಕ್ರಮದಲ್ಲಿ ಬಾಲಧಿಗೆ ಒಬ್ಬ ಮಗನು ಜನಿಸಿದನು. ಅವನಿಗೆ ‘ಮೇಧಾವಿ’ ಎಂದು ಹೆಸರಿಡಲಾಯಿತು. ಆದರೆ ಹೆಸರಿಗೆ ತಕ್ಕಂತೆ ಅವನು ಮೇಧಾವಿಯಾಗಲಿಲ್ಲ. ತನ್ನ ತಂದೆಗೆ ದೇವರಿಂದ ಸಿಕ್ಕಿರುವ ವರದ ವಿಚಾರವನ್ನು ತಿಳಿದುಕೊಂಡ ಮೇಧಾವಿಯು ಪರ್ವತಗಳಿರುವವರೆಗೆ ತಾನು ಸಾಯಲು ಸಾಧ್ಯವಿಲ್ಲ; ಪರ್ವತಗಳನ್ನು ನಾಶ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದುಕೊಂಡು ಪರಮ ದುರಹಂಕಾರಿಯಾಗಿ ಎಲ್ಲರಿಗೂ ಕಿರುಕುಳ ಕೊಡಲು ಪ್ರಾರಂಭಿಸಿದನು. ಒಮ್ಮೆ ಮೇಧಾವಿಯು ಧನುಜಾಕ್ಷನೆಂಬ ಋಷಿಗೆ ಹಿಂಸೆ ಕೊಟ್ಟಾಗ ಋಷಿಯು ಸಿಟ್ಟಿನಿಂದ “ನೀನು ಭಸ್ಮವಾಗಿ ಹೋಗು” ಎಂದು ಶಪಿಸಿದನು. ಆದರೆ ಅವನ ಶಾಪವು ಫಲಿಸಲಿಲ್ಲ. ಆಗ ಧನುಜಾಕ್ಷನು ದಿವ್ಯದೃಷ್ಟಿಯಿಂದ ಎಲ್ಲವನ್ನೂ ತಿಳಿದುಕೊಂಡನು. ತಕ್ಷಣ ಧನುಜಾಕ್ಷನು ದಿವ್ಯಶಕ್ತಿಯಿಂದ ಕಾಡೆಮ್ಮೆಗಳನ್ನು ಸೃಷ್ಟಿ, ಅವುಗಳಿಂದ ಪರ್ವತಗಳನ್ನು ಕುಟ್ಟಿ ಪುಡಿ ಮಾಡಿಸಿದನು. ತಕ್ಷಣ ಮೇಧಾವಿಯೂ ಸತ್ತು ಹೋದನು.
ಬಾಲಧಿಗೆ ಏನು ಬೇಕಾದರೂ ಕೇಳುವ ಅವಕಾಶವಿತ್ತು. ಆದರೆ ಅವನು ಮೊದಲನೆಯ ಮಗನ ಸಾವಿನ ದುಃಖಕ್ಕೆ ಒಳಗಾಗಿ ಸೂಕ್ತವಲ್ಲದ ಕೇಳಿಕೆಯನ್ನು ಮುಂದಿಟ್ಟು ಮತ್ತೆ ಪುತ್ರ ಶೋಕಕ್ಕೆ ಒಳಗಾದನು. ಬದಲು ಅವನು ಯೋಗ್ಯನಾದ ಮಗನನ್ನು ಕೇಳಿದ್ದರೆ ಬದುಕಿದ್ದಷ್ಟು ಕಾಲ ಯೋಗ್ಯತಾವಂತನಾದ ಮಗ ಸಿಗುತ್ತಿದ್ದ. ಅದಕ್ಕೇ, ದುಃಖ ಅಥವಾ ಸಂತೋಷದ ಭಾವೋದ್ವೇಗದಿಂದ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬಾರದು. ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಂಡರೆ ನಮ್ಮ ಅಪೇಕ್ಷೆಗಳು ಸರಿಯಾದ ಕಾಲಕ್ಕೆ ಸರಿಯಾದ ಅಪೇಕ್ಷೆಗಳೇ ಆಗಿರುತ್ತವೆ. ನೀವು ಈಗ ಏನಾಗಿದ್ದೀರೋ ಆ ವಯಸ್ಸು ಮತ್ತು ಸಾಮರ್ಥ್ಯಕ್ಕೆ ಸರಿಹೊಂದುವ ಅಪೇಕ್ಷೆಗಳನ್ನಿಟ್ಟುಕೊಂಡು ಅವುಗಳ ಸಾಧನೆಗೆ ತೊಡಗಬೇಕು.