ಬೆಂಗಳೂರು: ಕೊರೊನಾ ವೈರಸ್ ನ ಜೆಎನ್ 1 ಉಪ ತಳಿಯ ಒಟ್ಟು 20 ಸೋಂಕು ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದ್ದು, ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.
ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಮಾಂಡವೀಯ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು, ಅದರಲ್ಲಿ ಗುಂಡೂರಾವ್ ಭಾಗವಹಿಸಿದ್ದಾರೆ. ಸಭೆಯ ನಂತರ ವಿಕಾಸ ಸೌಧದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ನಿನ್ನೆ ಕೊರೊನಾ ವೈರಸ್ ಸೋಂಕಿಗೆ 64 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪಡೆದಿದೆ. JN.1 ವೈರಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿದೆ. ದೇಶದಲ್ಲಿ 20 JN.1 ಪ್ರಕರಣಗಳು ಪತ್ತೆಯಾಗಿವೆ. ಗೋವಾದಲ್ಲಿ 18, ಮಹಾರಾಷ್ಟ್ರದಲ್ಲಿ 1, ಕೇರಳದಲ್ಲಿ 1 ಕೇಸ್ ಪತ್ತೆಯಾಗಿದೆ ಎಂದು ತಿಳಿಸಿದರು.
ಕೋವಿಡ್ ಕುರಿತು ಗುರುವಾರ ತಾಂತ್ರಿಕ ಸಲಹಾ ಸಮಿತಿ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಆ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸುತ್ತೇವೆ ಎಂದು ಗುಂಡೂರಾವ್ ತಿಳಿಸಿದರು.
ಹೈರಿಸ್ಕ್ ದೇಶಗಳಿಂದ ಬರುವವರಿಗೆ ಸದ್ಯಕ್ಕೆ ಸ್ಕ್ರೀನಿಂಗ್ ಇಲ್ಲ. ಕೇರಳದಿಂದ ಬರುವ ಅಯ್ಯಪ್ಪ ಭಕ್ತರಿಗೂ ಸ್ಕ್ರೀನಿಂಗ್ ಮಾಡಲು ಹೇಳಿಲ್ಲ. ಕೋವಿಡ್ ಲಕ್ಷಣವಿದ್ದರೆ ಮಾತ್ರ ಪರೀಕ್ಷೆಗೆ ಒಳಪಡಿಸಲು ಸೂಚನೆ ನೀಡಲಾಗಿದೆ. ಕೇರಳ ಗಡಿಯ 4 ಜಿಲ್ಲೆಗಳಲ್ಲಿ ಹೆಚ್ಚು ಕೋವಿಡ್ ಟೆಸ್ಟ್ ಮಾಡಲಾಗುತ್ತದೆ ಎಂದು ಗುಂಡೂರಾವ್ ಮಾಹಿತಿ ನೀಡಿದರು.
ಟೆಸ್ಟಿಂಗ್ ಕಿಟ್, ಮಾಸ್ಕ್, ಔಷಧ ವಿತರಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಖಾಸಗಿ ಆಸ್ಪತ್ರೆಗಳಿಗೂ ದರ ನಿಗದಿ ಸಂಬಂಧ ನಾಳೆ ಚರ್ಚೆ ಆಗಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಆರ್ ಟಿ-ಪಿಸಿಆರ್ ಟೆಸ್ಟ್ ದರದ ಬಗ್ಗೆ ಚರ್ಚೆ ಮಾಡುತ್ತೇವೆ. ಸದ್ಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆರ್ ಟಿ-ಇಸಿಆರ್ ಟೆಸ್ಟ್ ಉಚಿತ ಇದೆ. ರಾಜ್ಯದಲ್ಲಿ ನಿತ್ಯ ಐದು ಸಾವಿರ ಟೆಸ್ಟಿಂಗ್ ಮಾಡುತ್ತೇವೆ ಎಂದು ಗುಂಡೂರಾವ್ ಹೇಳಿದರು.














