ಗಂಗಾವತಿ: ಕಿಷ್ಕಿಂಧಾ ಅಂಜನಾದ್ರಿ ಬೆಟ್ಟಕ್ಕೆ ದೇವರ ದರ್ಶನ ಪಡೆಯಲು ಆಗಮಿಸುತ್ತಿದ್ದ ಒರಿಸ್ಸಾ ಮೂಲದ ಇಬ್ಬರು ಹನುಮ ಭಕ್ತರ ಬೈಕ್ ವಿಜಯನಗರ ಕಾಲುವೆಗೆ ಬಿದ್ದು ಓರ್ವ ಮೃತಪಟ್ಟು ಮತ್ತೋರ್ವನ ಕಾಲು ಮುರಿದಿರುವ ಘಟನೆ ತಾಲೂಕಿನ ಸಾಣಾಪುರ ಮತ್ತು ವಿರುಪಾಪುರ ಗಡ್ಡಿ ರಾಜ್ಯ ಹೆದ್ದಾರಿ 130ರಲ್ಲಿ ಡಿ.7ರ ಶನಿವಾರ ನಡೆದಿದೆ.
ಕೊಪ್ಪಳದ ಮೆತಗಲ್ ಖಾಸಗಿ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಲಿಲ್ಲೂ ಲಾಲ್ ಟೆಂಡ (30) ಮೃತಪಟ್ಟಿದ್ದು, ಕಿರಣ್ ನಾಯಕ್(40) ಕಾಲು ಮುರಿದುಕೊಂಡ ವ್ಯಕ್ತಿ.
ಇವರಿಬ್ಬರೂ ಬೆಳಗಿನ ಜಾವ ಕೊಪ್ಪಳ ದಿಂದ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟಕ್ಕೆ ಶ್ರೀ ಆಂಜನೇಯ ಸ್ವಾಮಿ ದರ್ಶನಕ್ಕೆ ಆಗಮಿಸುವ ಸಂದರ್ಭದಲ್ಲಿ ತಿರುವು ರಸ್ತೆಯಲ್ಲಿರುವ ಸಾಣಾಪೂರ ಮತ್ತು ವಿರೂಪಾಪೂರಗಡ್ಡಿ ಮಾರ್ಗ ಮಧ್ಯೆ ವಿಜಯನಗರ ಕಾಲುವೆಗೆ ಬಿದ್ದ ಪರಿಣಾಮ ಲಿಲ್ಲೂ ಲಾಲ್ ಟೆಂಡ ಅವರು ಸ್ಥಳದಲ್ಲಿ ಮೃತಪಟ್ಟಿದ್ದು, ಕಿರಣ್ ನಾಯಕ್ ಅವರ ಬಲಗಾಲು ಮುರಿತಕ್ಕೊಳಗಾಗಿದೆ.
ಕಾಲುವೆಗೆ ಬಿದ್ದ ಇಬ್ಬರ ಪೈಕಿ ಲಿಲ್ಲೂ ಅವರು ವಿಜಯನಗರ ಕಾಲುವೆ ನೀರಿನಲ್ಲಿ ಮುಳುಗಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಕಿರಣ್ ನಾಯಕ ಅವರನ್ನು ಸ್ಥಳೀಯರು ರಕ್ಷಿಸಿ ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.