ಒಂದೆಲಗ ನೆಲದಲ್ಲಿ ಹರಡಿಕೊಳ್ಳುತ್ತದೆ.ನೀರಿರುವ ಜಾಗದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಅನೇಕರು ಒಂದೆಲಗವನ್ನೇ ಬ್ರಹ್ಮಿ ಎಂದು ಪರಿಗಣಿಸುತ್ತಾರೆ. ಇದು ನಿಜವಾದ ಬ್ರಹ್ಮೀ ಅಲ್ಲ ಒಂದೇ ಎಲೆಯಿಂದ ಈ ಸಸ್ಯ ಕಂಗೊಳಿಸು ವುದರಿಂದ ಒಂದೆಲಗ ಎಂದು ಹೆಸರು ಬಂದಿದೆ.ಆದರೆ ಒಂದೆಲಗ ಮತ್ತು ಬ್ರಹ್ಮಿಯ ಗುಣಗಳನ್ನು ಹೆಚ್ಚು ಕಡಿಮೆ ಒಂದೇ ರೀತಿ ಇವೆ.
ಸತ್ಯವರ್ಣನೆ :
ಒಂದೆಲಗವು ಎಪಿಯೇಸಿ ಕುಟುಂಬಕ್ಕೆ ಸೇರಿದ ನೆಲದಲ್ಲೇ ಹರಡುವ ಸಸ್ಯ.ಕಾಂಡವು ನೆಲದ ಮೇಲೆ ಬಳ್ಳಿಯಂತೆ ಹರಡಿಕೊಂಡು ಮೂರು ನಾಲ್ಕು ಅಂಗುಲ ಎತ್ತರ ಬೆಳೆಯುವ ಪುಟ್ಟ ಮೂಲಿಕೆ.ಕಾಂಡವು ನೆಲದ ಮೇಲೆಯೇ ಹಬ್ಬುವುದರಿಂದ ರಂಬೆಗಳು ಎಲೆಗಳ ಕಂಕುಳಲ್ಲಿ ಕಾಣಿಸಿಕೊಳ್ಳುತ್ತವೆ.ಹಸಿರು ಬಣ್ಣದ ಎಲೆಗಳು ದುಂಡಾಗಿದ್ದು ಅಂಚು ಗರಗಸದಂತೆ ಏರಿಳಿತವಾಗಿದೆ. ಹಣ್ಣು ಚಿಕ್ಕದಾಗಿದ್ದು ಚಪ್ಪಟೆಯಾಗಿರುತ್ತದೆ.
ಮಣ್ಣು:
ನೀರಾವರಿ ಸೌಲಭ್ಯವಿದ್ದಲ್ಲಿ ಒಂದೆಲಗವನ್ನು ಎಲ್ಲಾ ವಿವಿಧ ಮಣ್ಣುಗಳಲ್ಲಿ ಬೆಳೆಯಬಹುದು. ಆದರೆ ಅತೀ ಆಮ್ಲ ಅಥವಾ ಕ್ಷಾರಯುಕ್ತ ಮಣ್ಣು,ಜಿಗಟು ಮಣ್ಣು ಈ ಬೆಳೆಗೆ ಸೂಕ್ತವಲ್ಲ.
ಹವಾಗುಣ :
ಮಂಜು ಬೀಳುವ ಪ್ರದೇಶಗಳಲ್ಲಿ ಪ್ರದೇಶಗಳು ಇದಕ್ಕೆ ಸೂಕ್ತವಲ್ಲ.ಇದನ್ನು ಹಿಂಗಾರಿನಲ್ಲಿ ನಾಟಿ ಮಾಡುವುದರಿಂದ ಚಳಿಗಾಲದಲ್ಲಿ ಗಿಡಗಳು ಉತ್ತಮ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ.
ತಳಿಗಳು:
ಮಜ್ಜಪೋಷಕ್, ಕಾಯಕೀರ್ತಿ ಮತ್ತು ಲಕ್ನೊ ಲೋಕಲ್.
ಬೇಸಾಯ ಕ್ರಮಗಳು:
ಒಂದೆಗವನ್ನು ತೆವಳು ಕಾಂಡಗಳ ಸಹಾಯದಿಂದ ವೃದ್ಧಿ ಮಾಡಬಹುದು. ಒಂದು ಚದರ ಮೀಟರ್ ಪ್ರದೇಶವನ್ನು ಚೆನ್ನಾಗಿ ಅಗೆದು 5 ಕೆ.ಜಿ.ಕೊಟ್ಟಿಗೆ ಗೊಬ್ಬರ ಹಾಕಿ ಹದಗೊಳಿಸಬೇಕು. 15 ರಿಂದ 16 ಸಸಿಗಳನ್ನು 30 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು.ಈ ಬೆಳೆಯ ನಾಟಿಗೆ ಅಕ್ಟೋಬರ್ ತಿಂಗಳು ಬಹಳ ಸೂಕ್ತ.ನಾಟಿ ಮಾಡಲು ಬೇರು ಬಿಟ್ಟಿರುವ ಹಾಗೂ ಎಲೆಗಳುಳ್ಳ, ಕಾಂಡದ ತುಂಡುಗಳನ್ನು ಸಾಮಾನ್ಯವಾಗಿ ಬೆಳೆಸಲಾಗುತ್ತದೆ.ಗಿಡಗಳು ಬೆಳೆದ್ದಂತೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ತೆವಳು ರಂಬೆಗಳು ಮೂಡುತ್ತವೆ.ಭೂಮಿಯ ಸಂಪರ್ಕ ಹೊಂದಿದ ಪ್ರತಿ ಕಣ್ಣೂ ಬೇರು ಬಿಟ್ಟು ಒಂದೊಂದು ಸ್ವತಂತ್ರ ಗಿಡದಂತೆ ವರ್ತಿಸುತ್ತದೆ. ಶೇಕಡಾ 50ರಷ್ಟು ನೆರಳು ಒದಗಿಸಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯ.
ನೀರಾವರಿ:
ಮಣ್ಣಿನ ತೇವಾಂಶವನ್ನು ಆಧರಿಸಿ ನೀರನ್ನು ಈ ಸಸ್ಯಗಳಿಗೆ ಅವಶ್ಯಕತೆಗೆ ತಕ್ಕಂತೆ ನೀಡಬೇಕು.
ಕಳೆ*ಹತೋಟಿ :
ಬೆಳೆ ಅವಧಿಯಲ್ಲಿ 3 ರಿಂದ 4 ಬಾರಿ ಕಳೆಯನ್ನು ತೆಗೆಯ ಹಾಕಬೇಕು.
ಸಸ್ಯ ಸಂರಕ್ಷಣೆ :
ಎಲೆ ತಿನ್ನುವ ಕಂಬಳಿ ಹುಳುಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಯಾವುದೇ ಹಾನಿಕಾರವಾದ ರೋಗಗಳು ಈ ಸಸ್ಯಗಳಿಗೆ ಬರುವುದಿಲ್ಲ. ಕಂಬಳಿ ಹುಳುಗಳನ್ನು ಕಂಡಲ್ಲಿ ಹೊಸಕಿ ಹಾಕಬೇಕು.
ಕೊಯ್ಲು ಮತ್ತು ಇಳುವರಿ :
ಜನವರಿ ತಿಂಗಳ ನಂತರ ತೆವಳು ಬಳ್ಳಿಗಳಿಂದ ಮೇಲೆ ಬಂದಿರುವ ಎಲೆಗಳನ್ನು 15 ದಿನಗಳ ಅಂತರದಲ್ಲಿ ಕುಯ್ಲು ಮಾಡಬಹುದು. ಜೂನ್ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಯ್ಲು ಮಾಡಿ ಪೂರ್ಣಗೊಳಿಸಬಹುದು.ಕೊನೆಯ ಕುಯ್ಲಿನ ಸಮಯದಲ್ಲಿ ಕೆಲವು ತೆವಳು ಕಾಂಡಗಳನ್ನು ನಂತರದ ಸಸ್ಯಾಭಿವೃದ್ಧಿಗಾಗಿ ಹಾಗೆಯೇ ಬಿಟ್ಟು ಅವುಗಳನ್ನು ಅಕ್ಟೋಬರ್ ತಿಂಗಳಲ್ಲಿ ಕುಯ್ಲು ಮಾಡಬಹುದು.
ಕೊಯ್ಲು ಮಾಡಿದ ಸಸ್ಯ ಭಾಗವನ್ನು ನೆರಳಿನಲ್ಲಿ ಹರಡಿ ಒಣಗಲು ಬಿಡಬೇಕು. ನಂತರ ಅದನ್ನು ಚೀಲಗಳಲ್ಲಿ ತುಂಬಿ ತಂಪಾದ ವಾತಾವರಣದಲ್ಲಿ ಗೋಡೆಗಳಿಂದ ದೂರು ಶೇಖರಿಸಿಟ್ಟು ಶಿಲಿಂಧ್ರ ಹಾಗೂ ಕೀಟಗಳಿಂದಾಗುವ ಹಾನಿಯನ್ನು ತಪ್ಪಿಸಬಹುದು. ಒಂದು ಚದರ ಮೀಟರ್ ಪ್ರದೇಶದಿಂದ 500 ಗ್ರಾಂ ನಷ್ಟು ತಾಜಾ ಎಲೆಯನ್ನು ಮತ್ತು 200 ಗ್ರಾಂ ಒಣ ಎಲೆಯ ಇಳುವರಿಯನ್ನು ಪಡೆಯಬಹುದು.
ಉಪಯುಕ್ತ ಭಾಗಗಳು :
ಎಲೆ, ಕಾಂಡ,ಬೇರು ಇಡೀ ಸಸ್ಯ.
ರಾಸಾಯನಿಕ ಅಂಶಗಳು :
ಒಂದೆಲಗದಲ್ಲಿ ಏಷಿಯಾಟಿಕೋಸೈಡ್, ಟ್ರೈಟರ್ಪಿನಾಯ್ಡ್ ಅಂಶಗಳಿವೆ.