ಮಧ್ಯಪ್ರದೇಶ: ಆನ್ ಲೈನ್ ಗೇಮಿಂಗ್ ವಿವಾದವು ತಾರಕಕ್ಕೇರಿ ಕೊನೆಗೆ ವ್ಯಕ್ತಿಯೊಬ್ಬ ಯೋಧರೊಬ್ಬರ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಬಬ್ಲು ಖೇಮ್ರಿಯಾ ಎಂದು ಗುರುತಿಸಲಾದ ವ್ಯಕ್ತಿ, ಆನ್ ಲೈನ್ ಗೇಮ್ ನ ಐಡಿ ಕುರಿತು ಸೈನಿಕನ ಮಗಳೊಂದಿಗೆ ಜಗಳವಾಡಿದ್ದ, ಬಳಿಕ ಮಧ್ಯರಾತ್ರಿಯಲ್ಲಿ ಅವರ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇಡೀ ಘಟನೆ ಮನೆಯ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯೋಧನ ಪತ್ನಿಯ ದೂರಿನ ಮೇರೆಗೆ ಪೊಲೀಸರು ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಯೋಧರ ಮಗಳು ಮತ್ತು ಆರೋಪಿ ಆನ್ ಲೈನ್ ಗೇಮ್ ಫ್ರೀ ಫೈರ್ ಆಡುತ್ತಿದ್ದರು. ಬಬ್ಲು ಖೇಮ್ರಿಯಾ ಆಟಕ್ಕೆ ಲಕ್ಷಗಟ್ಟಲೆ ಖರ್ಚು ಮಾಡಿದ್ದ. ಯೋಧನ ಮಗಳು ಆಟವಾಡಲು ಬಬ್ಲು ಅವರ ಫ್ರೀ ಫೈರ್ ಐಡಿಯನ್ನು ತೆಗೆದುಕೊಂಡು ನಂತರ ಪಾಸ್ ವರ್ಡ್ ಬದಲಾಯಿಸಿ ಅದನ್ನು ಅವನೊಂದಿಗೆ ಹಂಚಿಕೊಳ್ಳಲು ನಿರಾಕರಿಸಿದಾಗ ವಿವಾದ ಶುರುವಾಗಿತ್ತು.
ಇದರಿಂದ ಮನನೊಂದ ಖೇಮ್ರಿಯಾ ಮಂಗಳವಾರ ರಾತ್ರಿ ಯೋಧನ ಮನೆಯ ಹೊರಗೆ ನಿಲ್ಲಿಸಿದ್ದ ಸ್ವಿಫ್ಟ್ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಯೋಧನ ಪತ್ನಿ ದೂರಿನ ಮೇರೆಗೆ ಮಹಾರಾಜಪುರ ಠಾಣೆ ಪೊಲೀಸರು ಖೇಮ್ರಿಯಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ.
ಈ ಹಿಂದೆ ಖೇಮ್ರಿಯಾ ವಿರುದ್ಧ ಯೋಧರ ಮಗಳು ಕಿರುಕುಳ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯದ ವಿಚಾರಣೆ ವೇಳೆ ಬಬ್ಲು ಪರಾರಿಯಾಗಿದ್ದ. ಈ ವಿಷಯಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ಇಂದರ್ ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ.