ಬಸವಕಲ್ಯಾಣ: ಆನ್’ಲೈನ್’ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಹಣದ ವ್ಯವಹಾರ ನಡೆಸಿ ಆತನಿಂದ ವಂಚನೆಗೊಳಗಾದ ಕಾಲೇಜು ಉಪನ್ಯಾಸಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಇಸ್ಲಾಂಪುರದಲ್ಲಿ ನಡೆದಿದೆ.
ಆರತಿ ಕನಾಟೆ (28) ಎಂಬುವರು ಮೃತರು.
ನಗರದ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಆರತಿ ಅವರು ಆನ್‌ಲೈನ್ ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಹಣ ಹೂಡಿಕೆ ಮಾಡಿದ್ದಾರೆ. ಮನೆಯಲ್ಲೇ ಕೂತು ಉದ್ಯೋಗ ಮಾಡಲು ಹಣ ಹೂಡಿಕೆ ಮಾಡಿ ಎಂದ ಕಾರಣ ಅವರು ₹ 1 ಸಾವಿರದಿಂದ ₹2.50 ಲಕ್ಷದವರೆಗೆ ಆನ್‌ಲೈನ್ ಮೂಲಕ ಹಣ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಅವರಿಗೆ ಇನ್ನೂ ₹82 ಸಾವಿರ ಕಳುಹಿಸಿದರೆ ಎಲ್ಲ ಹಣ ಹಿಂದಿರುಗಿಸಲಾಗುವುದು ಎಂಬ ಸಂದೇಶ ಬಂತಾದರೂ ಅವರಿಗೆ ಅಷ್ಟು ಹಣ ಹೊಂದಿಸಲು ಆಗಲಿಲ್ಲ. ವಂಚನೆಗೆ ಒಳಗಾದ ಮತ್ತು ಕುಟುಂಬದ ಗಮನಕ್ಕೆ ತಾರದೇ ಲಕ್ಷಾಂತರ ರೂಪಾಯಿ ಕಳೆದುಕೊಂಡ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಮನೆಯಲ್ಲಿ ಚಿನ್ನಾಭರಣ ತೆಗೆದಿಟ್ಟು, ಹಣ ಹೂಡಿಕೆ ಮಾಡಿದ ಏಜೆನ್ಸಿಯ ಹೆಸರಿರುವ ಚೀಟಿಯನ್ನು ಬರೆದಿದ್ದಾರೆ. ಚೀಟಿ ಸಿಕ್ಕ ಕೂಡಲೇ ತಂದೆ ಶಿವರಾಜ ಕನಾಟೆ ಅವರು ಬಾವಿ ಪರಿಶೀಲಿಸಿದಾಗ, ಶವ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.