ಬೆಂಗಳೂರು: ಕೊರೊನಾ ವೈರಸ್ ಮಹಾಮಾರಿ ಸೋಂಕಿನ ಆರ್ಭಟದ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕಳೆದ ಮೂರು ವರ್ಷಗಳಲ್ಲಿ ವಿವಿಧ ಸ್ಥಳಗಳಲ್ಲಿ ಆಯೋಜನೆ ಆಗಿದೆ. ಇದೀಗ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿ ಇರುವ ಕಾರಣ ಐಪಿಎಲ್ ಟೂರ್ನಿಯನ್ನು ಮತ್ತೆ ಹೋಮ್ ಅಂಡ್ ಅವೇ ಮಾದರಿಯಲ್ಲಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಮತ್ತೆ ಕಣ್ತುಂಬಿಕೊಳ್ಳಬಹುದಾಗಿದೆ.
ಐಪಿಎಲ್ 2023 ಟೂರ್ನಿಯು ಮಾರ್ಚ್ 31ರಿಂದ ಮೇ 28ರವರೆಗೆ ನಡೆಯಲಿದೆ, ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿದ್ದು, ಏಪ್ರಿಲ್ 2ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ತಂಡ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಎದುರು ತನ್ನ ಅಭಿಯಾನ ಆರಂಭಿಸಲಿದೆ.
ಟಿಕೆಟ್ ಮಾರಾಟ ಶುರುವಾಗಿದೆ
ಕ್ರಿಕೆಟ್ ಜಗತ್ತಿನ ಐಶಾರಾಮಿ ಟಿ20 ಲೀಗ್ ಟೂರ್ನಿಯ 16ನೇ ಆವೃತ್ತಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯಕ್ಕೆ ಟಿಕೆಟ್ಗಳ ಮಾರಾಟ ಈಗಾಗಗಲೇ ಶುರುವಾಗಿದೆ. ಕ್ರಿಕೆಟ್ ಪ್ರಿಯರು ಪೇಟಿಎಂ ಇನ್ಸೈಡರ್ ಮೂಲಕ ಆನ್ ಲೈನ್ ಟಿಕೆಟ್ ಗಳನ್ನು ಖರೀದಿ ಮಾಡಬಹುದಾಗಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನ ಪಂದ್ಯಕ್ಕೆ ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸೇರಲಿದ್ದಾರೆ ಎಂದೇ ನಿರೀಕ್ಷಿಸಲಾಗಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವು 1 ಲಕ್ಷದ 10 ಸಾವಿರ ಪ್ರೇಕ್ಷಕರನ್ನು ಹೊಂದುವ ಸಾಮರ್ಥ್ಯ ಪಡೆದಿದೆ. ಉದ್ಘಾಟನ ಪಂದ್ಯದ ಟಿಕೆಟ್ನ ಕನಿಷ್ಠ ಬೆಲೆ 800 ರೂ. ಆಗಿದೆ. ಕ್ರೀಡಾಂಗಣದ ಹೊರಗಿರುವ ಟಿಕೆಟ್ ಕೌಂಟರ್ ಗಳಲ್ಲಿಯೂ ಕ್ರಿಕೆಟ್ ಪ್ರಿಯರು ನೇರವಾಗಿ ಖರೀದಿ ಮಾಡಬಹುದು. ಮೊದಲು ಬಂದವರಿಗೆ ಆದ್ಯತೆ ನಿಟ್ಟಿನಲ್ಲಿ ಟಿಕೆಟ್ಗಳ ಮಾರಾಟವಾಗಲಿದೆ.
ಟೂರ್ನಿಯ ಎಲ್ಲ ಪಂದ್ಯಗಳಿಗೆ ಟಿಕೆಟ್ ಮಾರಾಟವನ್ನು ಆರಂಭಿಸಿಲ್ಲ. ಮೊದಲ ಮೂರು ಪಂದ್ಯಗಳಿಗೆ ಮಾತ್ರವೇ ಟಿಕೆಟ್ ಮಾರಾಟ ಶುರುವಾಗಿದೆ. ಟೂರ್ನಿಯ ಎರಡನೇ ಪಂದ್ಯ ಲಖನೌದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜಯಂಟ್ಸ್ ತಂಡಗಳು ಪೈಪೋಟಿ ನಡೆಸಿದರೆ, ಪಂಜಾಬ್ ನ ಪಿಸಿಎ ಐ.ಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿ ಆಗಲಿವೆ.
ಬುಕ್ ಮೈ ಶೋನಲ್ಲಿ ಟಿಕೆಟ್ ಮಾರಾಟ
ಟೂರ್ನಿಯ ಉಳಿದ ಪಂದ್ಯಗಳ ಟಿಕೆಟ್ ಗಳನ್ನು ಅಭಿಮಾನಿಗಳು ಆನ್ ಲೈನ್ ವೇದಿಕೆ ಬುಕ್ ಮೈ ಶೋ ಮೂಲಕ ಖರೀದಿ ಮಾಡಬಹುದಾಗಿದೆ. ಆಯಾ ಕ್ರೀಡಾಂಗಣಗಳಲ್ಲಿ ಪಂದ್ಯ ಆಯೋಜನೆ ಆಗುವ 3 ದಿನ ಮೊದಲು ಕ್ರೀಡಾಂಗಣದ ಹೊರಭಾಗದಲ್ಲಿ ಇರುವ ಕೌಂಟರ್ಗಳಲ್ಲಿ ಟಿಕೆಟ್ ಗಳು ನೇರ ಖರೀದಿಗೆ (ಆಫ್ಲೈನ್) ಲಭ್ಯವಾಗಲಿವೆ. ಮೂರು ವರ್ಷಗಳ ಬಳಿಕ ಐಪಿಎಲ್ ಪಂದ್ಯಗಳು ಹೋಮ್ ಅಂಡ್ ಅವೇ ಮಾದರಿಯಲ್ಲಿ ಆಯೋಜನೆ ಆಗುತ್ತಿರುವುದರಿಂದ ಈ ಬಾರಿ ಪ್ರತಿ ಪಂದ್ಯಗಳಿಗೆ ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗಲಿದೆ ಎಂದೇ ನಿರೀಕ್ಷಿಸಲಾಗಿದೆ.