ಮನೆ ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿರುವ 180 ಜನೌಷಧಿ ಕೇಂದ್ರ ಮಾತ್ರ ತೆರವು : ಸಚಿವ ದಿನೇಶ್ ಗುಂಡೂರಾವ್

ಸರ್ಕಾರಿ ಆಸ್ಪತ್ರೆಗಳಲ್ಲಿರುವ 180 ಜನೌಷಧಿ ಕೇಂದ್ರ ಮಾತ್ರ ತೆರವು : ಸಚಿವ ದಿನೇಶ್ ಗುಂಡೂರಾವ್

0

ಬೆಂಗಳೂರು: ರಾಜ್ಯದಲ್ಲಿ ಜನೌಷಧಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಇರುವ 180 ಜನೌಷಧಿ ಕೇಂದ್ರಗಳನ್ನು ಮಾತ್ರ ತೆರವುಗೊಳಿಸುವ ಕುರಿತು ಚರ್ಚೆ ನಡೆದಿದ್ದು, ಉಳಿದ 1220 ಕೇಂದ್ರಗಳ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

“ರಾಜ್ಯದಲ್ಲಿ 1400ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿದ್ದು, ನಾವು ಸಂಪೂರ್ಣವಾಗಿ ಈ ಕೇಂದ್ರಗಳನ್ನು ಸ್ಥಗಿತಗೊಳಿಸುವ ಉದ್ದೇಶ ಹೊಂದಿಲ್ಲ. ಕೇವಲ ಸರ್ಕಾರಿ ಆಸ್ಪತ್ರೆಗಳೊಳಗೆ ಕಾರ್ಯನಿರ್ವಹಿಸುತ್ತಿರುವ 180 ಕೇಂದ್ರಗಳ ಬಗ್ಗೆ ಮಾತ್ರ ಮೌಲ್ಯಮಾಪನ ಮಾಡಲಾಗುತ್ತಿದೆ” ಎಂದು ಸಚಿವರು ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರವೇ ಉಚಿತವಾಗಿ ಔಷಧಿಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲೂ, ಅಂತಹ ಆಸ್ಪತ್ರೆಗಳ ಆವರಣದಲ್ಲಿ ಔಷಧ ಮಾರಾಟದ ಮಳಿಗೆಗಳ ಅಗತ್ಯವಿಲ್ಲ ಎಂಬುದನ್ನು ಸಚಿವರು ಉಲ್ಲೇಖಿಸಿದರು. “ವೈದ್ಯರು ಬರೆದ ಚೀಟಿಗಳ ಮೂಲಕ ಹೊರಗಿನಿಂದ ಔಷಧ ತರಿಸುವ ಪದ್ಧತಿಗೆ ತಡೆ ನೀಡಬೇಕು. ಸಾರ್ವಜನಿಕರು ಉಚಿತ ಔಷಧಿಗಳನ್ನೇ ಪಡೆಯಬೇಕು ಎಂಬುದೇ ಸರ್ಕಾರದ ನಿಲುವಾಗಿದೆ” ಎಂದರು.

ಜನೌಷಧಿ ಕೇಂದ್ರಗಳ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಬೆರೆಸುವುದು ಸರಿಯಲ್ಲ. ಅಲ್ಲದೇ ತಕ್ಷಣಕ್ಕೆ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಎಲ್ಲಾ ಜನೌಷಧಿ ಕೇಂದ್ರಗಳನ್ನ ಮುಚ್ಚಿಸಿ ಎಂದು ಹೇಳಿಲ್ಲ. ಹೊಸದಾಗಿ ಸಲ್ಲಿಕೆಯಾಗಿದ್ದ 31 ಪ್ರಸ್ತಾವನೆಗಳನ್ನ ತಿರಸ್ಕರಿಸಲಾಗಿದೆ ಎಂದು ಹೇಳಿದರು.

ಹಾಲಿ ಆಸ್ಪತ್ರೆಗಳ ಆವರಣದಲ್ಲಿರುವ ಕೇಂದ್ರಗಳು ಇಲಾಖೆ ಮತ್ತು ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನ ಪರಿಶೀಲಿಸಿ ಕ್ರಮ ಜರುಗಿಸಲು ಸೂಚಿಸಲಾಗಿದೆ. ಹಲವು ಜನೌಷಧಿ ಕೇಂದ್ರಗಳ ಒಪ್ಪಂದಗಳು ನವೀಕರಣವಾಗಿಲ್ಲ. ಇನ್ನು ಕೆಲವು ಕೇಂದ್ರಗಳು ಇತ್ತೀಚೆಗೆ ಆರಂಭವಾಗಿದ್ದು, ಅವರು ಸಾಕಷ್ಟು ಬಂಡವಾಳ ಹೂಡಿರುತ್ತಾರೆ. ಅವರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಅವರ ಒಪ್ಪಂದ ಮುಗಿದ ಬಳಿಕವೇ ಸ್ಥಗಿತಗೊಳಿಸುವ ಕುರಿತು ಆಲೋಚಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳ ಔಷಧ ಕೇಂದ್ರಗಳಲ್ಲಿ ಔಷಧಿಗಳ ಕೊರತೆಯಿಲ್ಲ. ಕೆಲವು ಕಡಿಮೆ ಬೇಡಿಕೆ ಇರುವ ಔಷಧಿಗಳು ಇಲ್ಲದಿದ್ದರೆ ಅವುಗಳನ್ನ ಬಿಪಿಪಿಐನಿಂದ ಖರೀದಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಖರೀದಿಗೆ ಅಗತ್ಯವಿರುವ ಹಣಕಾಸಿನ ಲಭ್ಯತೆಯೂ ಆಸ್ಪತ್ರೆಗಳ ಬಳಿ ಇದೆ. ಹೀಗಾಗಿ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಉಚಿತವಾಗಿ ಔಷಧಗಳನ್ನ ಪಡೆಯಬೇಕು ಎಂಬುದು ಸಚಿವರ ಸಂದೇಶ.