ಮೈಸೂರು(Mysuru): ಸರಗೂರು ಬಳಿಯ ಚಾಮನಹಳ್ಳಿಯ ತೋಟದಲ್ಲಿ ಭಾನುವಾರ ಸಂಜೆ ದನ ಕಾಯುವ ವ್ಯಕ್ತಿಯೊಬ್ಬರಿಗೆ ಹುಲಿ ಕಾಣಿಸಿಕೊಂಡಿದ್ದು, ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಕಾರ್ಯಾಚಾರಣೆ ಆರಂಭಿಸಿದೆ.
ಭಾನುವಾರ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದ ಹುಲಿ ಇರುವ ಜಾಗಗಳಲ್ಲಿ ಅರಣ್ಯ ಇಲಾಖೆಯಿಂದ ಕ್ಯಾಮೆರಾ ಅಳವಡಿಸಲಾಗಿತ್ತು. ಇಂದು ಬೆಳಗ್ಗೆ ಸಾಕಾನೆಗಳಾದ ಭೀಮ ಹಾಗೂ ಶ್ರೀಕಂಠನ ನೆರವಿನಿಂದ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿರುವ ಈ ಹುಲಿ ತೋಟದಲ್ಲಿ ನವಿಲನ್ನು ಬೇಟೆಯಾಡಿ ಅದನ್ನು ಅಲ್ಲೇ ತಿಂದು ಮುಗಿಸಿದೆ. ತೋಟದಿಂದ ಹೊರ ಹೋಗಲು ಪ್ರಯತ್ನಿಸಿದಾಗ ತೋಟದ ಸುತ್ತ ಅಳವಡಿಸಿರುವ ಸೋಲಾರ್ ತಂತಿಗೆ ಹುಲಿಯ ಹಿಂಬದಿಯ ಕಾಲು ಸಿಕ್ಕಿ, ಗಾಯಗೊಂಡಿದೆ ಎಂದು ಹೇಳಲಾಗುತ್ತಿದೆ.
ಡಿಸಿಎಫ್ ಕಮಲ ಕರಿಕಾಳನ್, ಎಸಿಎಫ್ ಶಿವರಾಮು, ಆರ್ಎಫ್ಒ ಮಧು, ವೈದ್ಯ ಪ್ರಕಾಶ್ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಹುಲಿ ಸೆರೆಹಿಡಿಯಲು ಕಾರ್ಯಾಚರಣೆ ಆರಂಭವಾಗಿದೆ.