ಮನೆ ಸುದ್ದಿ ಜಾಲ ಆಪರೇಷನ್‌ ಸಿಂಧೂರ – ಸಂವಿಧಾನಕ್ಕೆ ತಿದ್ದುಪಡಿ ತಂದು ಆಸೀಮ್‌ ಮುನೀರ್‌ಗೆ ಪ್ರಮುಖ ಹುದ್ದೆ

ಆಪರೇಷನ್‌ ಸಿಂಧೂರ – ಸಂವಿಧಾನಕ್ಕೆ ತಿದ್ದುಪಡಿ ತಂದು ಆಸೀಮ್‌ ಮುನೀರ್‌ಗೆ ಪ್ರಮುಖ ಹುದ್ದೆ

0

ಇಸ್ಲಾಮಾಬಾದ್ : ಭಾರತ ನಡೆಸಿದ ಆಪರೇಷನ್‌ ಸಿಂಧೂರದಿಂದ ಕಂಗೆಟ್ಟಿರುವ ಪಾಕಿಸ್ತಾನ ತನ್ನ ಸೇನೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ರಕ್ಷಣಾ ಪಡೆಗಳ ಮುಖ್ಯಸ್ಥರ ಹೊಸ ಹುದ್ದೆಯನ್ನು ರಚಿಸಲು ಪಾಕ್‌ ಸರ್ಕಾರ ಸಾಂವಿಧಾನಿಕ ತಿದ್ದುಪಡಿಯನ್ನು ತಂದಿದೆ.

ಸಂಸತ್ತಿನಲ್ಲಿ ಮಂಡಿಸಲಾದ 27 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯು ಸಂವಿಧಾನದ 243 ನೇ ವಿಧಿಗೆ ಬದಲಾವಣೆಗಳನ್ನು ಪ್ರಸ್ತಾಪಿಸುತ್ತದೆ. ಇದು ಸಶಸ್ತ್ರ ಪಡೆಗಳು ಸೇರಿದಂತೆ ಇತರ ವಿಷಯಗಳಿಗೆ ಸಂಬಂಧಿಸಿದೆ.

ತಿದ್ದುಪಡಿ ಮಸೂದೆಯಡಿಯಲ್ಲಿ, ರಾಷ್ಟ್ರಪತಿಗಳು ಪ್ರಧಾನ ಮಂತ್ರಿಯ ಸಲಹೆಯ ಮೇರೆಗೆ ಸೇನಾ ಮುಖ್ಯಸ್ಥರು ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥರನ್ನು ನೇಮಿಸುತ್ತಾರೆ. ರಕ್ಷಣಾ ಪಡೆಗಳ ಮುಖ್ಯಸ್ಥರೂ ಆಗಿರುವ ಸೇನಾ ಮುಖ್ಯಸ್ಥರು, ಪ್ರಧಾನ ಮಂತ್ರಿಯೊಂದಿಗೆ ಸಮಾಲೋಚಿಸಿ ರಾಷ್ಟ್ರೀಯ ಕಾರ್ಯತಂತ್ರದ ಕಮಾಂಡ್‌ನ ಮುಖ್ಯಸ್ಥರನ್ನು ನೇಮಿಸುತ್ತಾರೆ. ರಾಷ್ಟ್ರೀಯ ಕಾರ್ಯತಂತ್ರದ ಕಮಾಂಡ್‌ನ ಮುಖ್ಯಸ್ಥರು ಪಾಕಿಸ್ತಾನ ಸೇನೆಯವರಾಗಿರುತ್ತಾರೆ.

ಸರ್ಕಾರವು ಸಶಸ್ತ್ರ ಪಡೆಗಳ ವ್ಯಕ್ತಿಗಳನ್ನು ಫೀಲ್ಡ್ ಮಾರ್ಷಲ್, ಮಾರ್ಷಲ್ ಆಫ್ ದಿ ಏರ್ ಫೋರ್ಸ್ ಮತ್ತು ಅಡ್ಮಿರಲ್ ಆಫ್ ದಿ ಫ್ಲೀಟ್ ಹುದ್ದೆಗಳಿಗೆ ಬಡ್ತಿ ನೀಡಲು ಸಾಧ್ಯವಾಗುತ್ತದೆ. ಫೀಲ್ಡ್ ಮಾರ್ಷಲ್ ಅವರ ಹುದ್ದೆ ಮತ್ತು ಸವಲತ್ತುಗಳು ಜೀವನಪರ್ಯಂತ ಇರುತ್ತವೆ. ಅಂದರೆ ಫೀಲ್ಡ್ ಮಾರ್ಷಲ್‌ಗಳು ಜೀವನಪರ್ಯಂತ ಅದೇ ಹುದ್ದೆಯಲ್ಲಿ ಉಳಿಯುತ್ತಾರೆ.

ಮೇ ತಿಂಗಳಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವಿನ ನಾಲ್ಕು ದಿನಗಳ ಸಂಘರ್ಷದಿಂದ ಪಾಠ ಕಲಿತು ಪಾಕ್‌ ಸರ್ಕಾರ ಈ ಕ್ರಮಕೈಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ಭಾರತವು ಮೇ 7 ರಂದು ಪಾಕಿಸ್ತಾನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ನಡೆಸಿತು. ಈ ದಾಳಿಗಳು ನಾಲ್ಕು ದಿನಗಳ ತೀವ್ರ ಘರ್ಷಣೆಗಳಿಗೆ ಕಾರಣವಾದವು.

ಸಂಘರ್ಷದ ನಂತರ, ಪಾಕಿಸ್ತಾನ ಸರ್ಕಾರವು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡಿತು. ಇದರಿಂದಾಗಿ ಅವರು ದೇಶದ ಇತಿಹಾಸದಲ್ಲಿ ಈ ಹುದ್ದೆಗೆ ಬಡ್ತಿ ಪಡೆದ ಎರಡನೇ ಉನ್ನತ ಮಿಲಿಟರಿ ಅಧಿಕಾರಿಯಾಗಿದ್ದಾರೆ.