ಮನೆ ರಾಜ್ಯ ಆಪರೇಷನ್ ಸಿಂಧೂರ್ : ಭಾರತೀಯ ಸೇನೆಯನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ!

ಆಪರೇಷನ್ ಸಿಂಧೂರ್ : ಭಾರತೀಯ ಸೇನೆಯನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ!

0

ಬೆಂಗಳೂರು : ಪಾಕಿಸ್ತಾನದ ಒಳಗೆ ನುಗ್ಗಿ ಉಗ್ರರ ನೆಲೆಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆಯ “ಆಪರೇಷನ್ ಸಿಂಧೂರ” ಕಾರ್ಯಚರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರೀ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಾವೇರಿ ನಿವಾಸದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಗೆ ಅವರು ದೇವಾಲಯದ ದರ್ಶನ ಮಾಡಿ, ಕುಂಕುಮ ಇಟ್ಟು ಆಗಮಿಸಿದ್ದು ವಿಶೇಷ ಗಮನ ಸೆಳೆದಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ನಾನು ಪಟಾಲಮ್ಮ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ಬಂದಿದ್ದೇನೆ. ಇದೊಂದು ಸಂಪ್ರದಾಯ. ನನ್ನ ಭಕ್ತಿಯ ಭಾಗವಾಗಿ ನಾನು ಕುಂಕುಮ ಇಟ್ಟಿದ್ದೇನೆ. ಇದರಲ್ಲಿ ಬೇರೆ ಅರ್ಥವಿಲ್ಲ” ಎಂದು ಸ್ಪಷ್ಟನೆ ನೀಡಿದರು.

ಆಪರೇಷನ್ ಸಿಂಧೂರ ಕುರಿತು ಮಾತನಾಡಿದ ಅವರು, “ಭಾರತೀಯ ಸೇನೆ ಈ ಬಾರಿ ಪಾಕಿಸ್ತಾನದ ಒಳಗೆ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಸುಮಾರು 9 ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಲಾಗಿದೆ. ಇದು ಪಾಕಿಸ್ತಾನಕ್ಕೆ ತಕ್ಕ ಉತ್ತರವಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಅಪರಾಧಿಗಳಿಂದಾಗಿ ಹುತಾತ್ಮರಾದ ಭಾರತೀಯ ನಾಗರಿಕರ ಸಾವಿಗೆ ತಕ್ಷಣದ ಪ್ರತಿಕ್ರಿಯೆಯಾಗಿದೆ” ಎಂದು ಹೇಳಿದರು.

“ನಮ್ಮ ಸೈನಿಕರು ಪರಾಕ್ರಮ ತೋರಿಸಿದ್ದಾರೆ. ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಿದ್ದು, ಯಾವುದೇ ನಾಗರಿಕರಿಗೆ ಹಾನಿಯಾಗದಂತೆ ಕಾಪಾಡಿದ್ದಾರೆ. ಈ ಕಾರ್ಯಚರಣೆಗೆ ಭಾರತೀಯರಾಗಿ ನಾವು ಹೆಮ್ಮೆಪಡುವಂತದ್ದು. ಕರ್ನಾಟಕ ಸರ್ಕಾರದ ಪರವಾಗಿ ನಾನು ನಮ್ಮ ವೀರ ಯೋಧರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಿಎಂ ಮುಂದಾಗಿ, “ಈ ರೀತಿಯ ಉಗ್ರ ಕೃತ್ಯಗಳ ವಿರುದ್ಧ ಭಾರತದ ಪ್ರತಿಕ್ರಿಯೆ ಬಹುಮುಖ್ಯವಾಗಿದೆ. ನಾವು ಎಚ್ಚರ ವಹಿಸುತ್ತಿದ್ದೇವೆ. ಕೇಂದ್ರ ಸರ್ಕಾರದ ಜೊತೆ ಸಮನ್ವಯದಲ್ಲಿ ರಾಜ್ಯದ ಎಲ್ಲಾ ವಿಭಾಗಗಳಲ್ಲಿ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ರಾಯಚೂರಿನಲ್ಲಿ ನಿಗದಿಯಾಗಿದ್ದ ರ‍್ಯಾಲಿಯನ್ನು ಈ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ಭದ್ರತೆ ನಮ್ಮ ಮೊದಲ ಆದ್ಯತೆ” ಎಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್ ಶಾಂತಿ ಸಂಬಂಧಿಸಿದ ಟ್ವೀಟ್‌ ಅನ್ನು ಡಿಲೀಟ್ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, “ಇದು ಗಾಂಧಿ ಮತ್ತು ಬಸವಣ್ಣನವರ ಕಾಲವಲ್ಲ. ಇಂದಿನ ಭಯೋತ್ಪಾದನೆಯ ಬೆಳವಣಿಗೆಗಳನ್ನು ನಾವು ಸುಮ್ಮನೆ ನೋಡಲಾರೆವು. ಬಲಿಷ್ಠ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಬೇರೆ ಟೀಕೆಗಳಿಗೆ ಪ್ರತಿಕ್ರಿಯೆ ನೀಡುವುದು ಬೇಡ” ಎಂದು ತಿಳಿಸಿದ್ದಾರೆ.

ಆಪರೇಷನ್ ಸಿಂಧೂರ ಮೂಲಕ ಭಾರತವು ತನ್ನ ಭದ್ರತಾ ತಂತ್ರಜ್ಞಾನ, ಸೈನಿಕ ಸಾಮರ್ಥ್ಯ ಮತ್ತು ತಕ್ಷಣದ ಪ್ರತಿಕ್ರಿಯೆಯ ಸಾಮರ್ಥ್ಯವನ್ನು ವಿಶ್ವದ ಮುಂದೆ ಪ್ರದರ್ಶಿಸಿದೆ. ಈ ಕಾರ್ಯಾಚರಣೆ ಪಾಕಿಸ್ತಾನ ಬೆಂಬಲಿತ ಉಗ್ರರಿಗೆ ಎಚ್ಚರಿಕೆಯ ಪಾಠವಾಗಿದ್ದು, ಭಾರತದ ಭದ್ರತೆ ಮತ್ತು ಶಿಸ್ತು ಬಗ್ಗೆ ಮತ್ತೊಮ್ಮೆ ವಿಶ್ವಾಸ ಮೂಡಿಸಿದೆ.