ನವದೆಹಲಿ : ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಪಾಕಿಸ್ತಾನದಲ್ಲಿ ಭಯೋತ್ಪಾದಕರ ತಾಣಗಳನ್ನು ನಾಶಮಾಡುವಷ್ಟರಲ್ಲೇ ಸೀಮಿತವಾಗದೆ, ಪಾಕಿಸ್ತಾನದ JF-17 ಯುದ್ಧವಿಮಾನವನ್ನೂ ಹೊಡೆದುರುಳಿಸಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ. ಈ ಚೀನಾ ನಿರ್ಮಿತ ಯುದ್ಧವಿಮಾನ ಭಾರತೀಯ ವಿಮಾನ ದಾಳಿಗೆ ಪ್ರತಿಸ್ಪಂದಿಸಲು ಬರುತ್ತಿದ್ದ ಸಂದರ್ಭದಲ್ಲಿ, ಭಾರತೀಯ ವಾಯುಪಡೆ ಕ್ಷಿಪಣಿಯಿಂದ ತಕ್ಷಣವೇ ಗುರಿಯಾಗಿಸಿ ನಾಶಪಡಿಸಿದೆ ಎಂದು ಮೂಲಗಳು ತಿಳಿಸುತ್ತಿವೆ.
ಈ ಘಟನೆಯ ಕುರಿತು ಭಾರತೀಯ ಸೇನೆಯಿಂದ ಇನ್ನೂ ಅಧಿಕೃತವಾಗಿ ಮಾಹಿತಿ ಬಹಿರಂಗವಾಗಿಲ್ಲ. ಆದರೆ, ಭದ್ರತಾ ತಜ್ಞರು ಮತ್ತು ಮಾಧ್ಯಮ ಮೂಲಗಳು ನೀಡಿದ ವರದಿಗಳ ಪ್ರಕಾರ, ಭಾರತ ಕಾರ್ಯಾಚರಣೆ ವೇಳೆ ದಿಟ್ಟ ನಿರ್ಧಯತೆಯಿಂದ ಪ್ರತಿರೋಧಿಸಿದ ಪಾಕ್ ಯುದ್ಧವಿಮಾನವನ್ನೇ ನಾಶಮಾಡಿದೆ.
ಚೀನಾ ನಿರ್ಮಿತ ಯುದ್ಧವಿಮಾನ JF-17 ಇದು ಪಾಕಿಸ್ತಾನದ ವಾಯುಪಡೆಯ ಮುಖ್ಯ ಅವಲಂಬನೆಗಳಲ್ಲಿ ಒಂದಾಗಿದೆ. ಈ ವಿಮಾನವನ್ನು ಭಾರತವು ಸುಲಭವಾಗಿ ಹೊಡೆದುರುಳಿಸಿರುವುದು ತಾಂತ್ರಿಕವಾಗಿ ಭಾರತೀಯ ಸೇನೆಯ ಪ್ರಾಬಲ್ಯವನ್ನು ಮತ್ತಷ್ಟು ದೃಢಪಡಿಸುತ್ತದೆ.
ಈ ಬೆಳವಣಿಗೆ 2019ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರದ ಪರಿಸ್ಥಿತಿಯನ್ನು ನೆನಪಿಸುತ್ತದೆ. ಆ ವೇಳೆ ಪಾಕಿಸ್ತಾನ ತನ್ನ ಎಫ್-16 ಯುದ್ಧವಿಮಾನಗಳ ಮೂಲಕ ಭಾರತವನ್ನು ಗುರಿಯಾಗಿಸಿತ್ತು. ತಕ್ಷಣದ ಪ್ರತಿಕ್ರಿಯೆಯಾಗಿ, ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್, ಮಿಗ್-21 ವಿಮಾನದ ಮೂಲಕ ಪಾಕ್ ಎಫ್-16 ವಿಮಾನವೊಂದನ್ನು ಹೊಡೆದುರುಳಿಸಿದ್ದರು. ಈ ವೇಳೆ ಅವರ ಮಿಗ್-21 ವಿಮಾನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪತನಗೊಂಡಿತ್ತು. ಪಾಕಿಸ್ತಾನ ಅವರ ಬಂಧನ ಮಾಡಿ ಸುಮಾರು 58 ಗಂಟೆಗಳ ಕಾಲ ಕಸ್ಟಡಿಯಲ್ಲಿ ಇಟ್ಟಿತ್ತು. ಬಳಿಕ ಭಾರತ ಸರ್ಕಾರದ ತೀವ್ರ ರಾಜತಾಂತ್ರಿಕ ಒತ್ತಡದ ಪರಿಣಾಮವಾಗಿ ಅವರನ್ನು ಸುರಕ್ಷಿತವಾಗಿ ಹಿಂದಿರುಗಿಸಲು ಸಾಧ್ಯವಾಯಿತು.
ಈ ಬಾರಿ ಕೂಡ, ಭಾರತೀಯ ಸೇನೆಯ ದಿಟ್ಟ ನಿರ್ಧಾರ ಮತ್ತು ಪ್ರಬಲ ಕಾರ್ಯಾಚರಣೆ ಮತ್ತೊಮ್ಮೆ ಪಾಕಿಸ್ತಾನ ಹಾಗೂ ಭಯೋತ್ಪಾದಕ ಸಂಘಟನೆಗಳಿಗೆ ಎಚ್ಚರಿಕೆ ನೀಡಿದೆ. ಈ ಏರ್ಸ್ಟ್ರೈಕ್ನಲ್ಲಿ 80ಕ್ಕೂ ಹೆಚ್ಚು ಉಗ್ರರು ನಿರ್ನಾಮವಾಗಿದ್ದು, ಪಾಕಿಸ್ತಾನದಲ್ಲಿ ತೀವ್ರ ಆತಂಕ ಮತ್ತು ಬಿಗುತನ ಸೃಷ್ಟಿಯಾಗಿದೆ.
JF-17 ವಿಮಾನ ಹೊಡೆದುರುಳಿಸಿದ ಸುದ್ದಿ ಅಧಿಕೃತವಾಗಿ ದೃಢಪಟ್ಟಲ್ಲಿ, ಇದು ಭಾರತೀಯ ವಾಯುಪಡೆಯ ಮತ್ತೊಂದು ಭವ್ಯ ಸಾಧನೆಯಾಗಿ ದಾಖಲಾಗಲಿದೆ. ಪಾಕ್ನ ಯುದ್ಧ ಸಾಮರ್ಥ್ಯಕ್ಕೂ ಹಾಗೂ ಚೀನಾದ ತಂತ್ರಜ್ಞಾನದ ನಂಬಿಕೆಗೂ ಭಾರೀ ಹೊಡೆತವಾಗುವ ಸಾಧ್ಯತೆ ಇದೆ.















