ನವದೆಹಲಿ (New Delhi): ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ್ ವಿರುದ್ಧ ದೇಶದಾದ್ಯಂತ ಸೇನಾ ಭರ್ತಿ ಆಕಾಂಕ್ಷಿಗಳು ಹಾಗೂ ಹಲವರು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಮತ್ತೊಂದು ಸಭೆ ಕರೆದಿದ್ದಾರೆ.
ರಾಜನಾಥ್ ಸಿಂಗ್ ಅವರು ಸೇನಾ ನಾಯಕರ ಜೊತೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ದೆಹಲಿಯ ತಮ್ಮ ನಿವಾಸಲ್ಲಿ ರಾಜನಾಥ್ ಸಿಂಗ್ ಅವರು ಸಭೆ ನಡೆಸಲಿದ್ದಾರೆ. 24 ಗಂಟೆಯಲ್ಲಿ ರಕ್ಷಣಾ ಸಚಿವರು ಎರಡನೇ ಬಾರಿಗೆ ಸಭೆ ಕರೆದಿದ್ದಾರೆ.
ಏತನ್ಮಧ್ಯೆ ನಿನ್ನೆಯಷ್ಟೇ ಅಗ್ನಿಪಥ ವಿರುದ್ಧದ ಪ್ರತಿಭಟನೆಗಳ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನೆಯ ಮೂರೂ ವಿಭಾಗದ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದರು. ಆದರೆ, ಪ್ರತಿಭಟನೆಗಳು ಮತ್ತಷ್ಟು ರಾಜ್ಯಗಳಿಗೆ ವ್ಯಾಪಿಸಿರುವುದರಿಂದ ಸಚಿವರನ್ನು ಆತಂಕಕ್ಕೆ ಈಡು ಮಾಡಿದೆ. ಹೀಗಾಗಿ ಇಂದು ಮತ್ತೊಂದು ಸಭೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಪ್ರತಿಭಟನೆಗಳು ಉಗ್ರ ಸ್ವರೂಪ ತಾಳಿದ್ದ ಬಿಹಾರದಲ್ಲಿ ಸುಮಾರು 700 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಸರ್ಕಾರದ ಆಸ್ತಿ–ಪಾಸ್ತಿಗೆ ಧಕ್ಕೆ ಮಾಡಿದ ಸುಮಾರು 200 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.