ಮಂಡ್ಯ: ಅಮ್ಯೂಸ್ಮೆಂಟ್ ಪಾರ್ಕ್ ಮಾಡಲು ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಸ್ಥಳಗಳು ಇವೆ. ಕೆಆರ್‌ಎಸ್‌ನಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಮಾಡುವುದಕ್ಕೆ ನನ್ನ ವಿರೋಧವಿದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ಸಂಸದ ಯದುವೀರ್ ಅವರು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. “ಅಭಿವೃದ್ಧಿಗೆ ನಾನು ವಿರೋಧಿಯಾಗಿಲ್ಲ. ಆದರೆ ಕೆಆರ್‌ಎಸ್‌ನಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಎಂಬುದು ಸೂಕ್ತವಲ್ಲ. ಈ ಪ್ರದೇಶಕ್ಕೆ ಈಗಾಗಲೇ ಸಾವಿರಾರು ಜನ ಭೇಟಿ ನೀಡುತ್ತಿದ್ದಾರೆ. ಮೂಲಭೂತ ಸೌಕರ್ಯಗಳನ್ನು ಸುಧಾರಿಸಿದರೆ ಸಾಕು. ನೈಸರ್ಗಿಕ ಪರಿಸರ ಹಾಳಾಗದಂತೆ ನೋಡಿಕೊಳ್ಳಬೇಕು” ಎಂದು ಅವರು ಅಭಿಪ್ರಾಯಪಟ್ಟರು.
ಅವರು ಮುಂದುವರೆದು, “ಮಂಡ್ಯ ಜಿಲ್ಲೆಯಲ್ಲಿ ಹಲವಾರು ಜಾಗಗಳು ಖಾಲಿ ಇವೆ. ರೈತರ ಅಭಿಪ್ರಾಯ ಪಡೆದು, ಅವರಿಗೆ ನಷ್ಟವಾಗದ ರೀತಿಯಲ್ಲಿ ಬೇರೊಂದು ಸ್ಥಳದಲ್ಲಿ ಪಾರ್ಕ್ ನಿರ್ಮಿಸುವುದು ಉತ್ತಮ” ಎಂದು ಸಲಹೆ ನೀಡಿದರು.
ಕೆಆರ್‌ಎಸ್ ಜಲಾಶಯ ನಿರ್ಮಾಣವಾಗಿ ಈಗ ಶತಮಾನ ತುಂಬುತ್ತಿದೆ. ಇದು ಇತಿಹಾಸ ಹಾಗೂ ರಾಜ್ಯದ ಜೀವನಾಡಿಯಾಗಿ ಪರಿಗಣಿಸಬೇಕು. “ಡ್ಯಾಂ ಸುರಕ್ಷತೆಗೆ ಪ್ರಾಥಮಿಕ ಮಹತ್ವ ನೀಡಬೇಕು. ಯಾವುದೇ ಕಾಮಗಾರಿ ಅಥವಾ ಯೋಜನೆಯು ಅದಕ್ಕೆ ಅಪಾಯವಾಗಬಾರದು” ಎಂದು ಎಚ್ಚರಿಸಿದರು.
ಯದುವೀರ್ ಅವರು ಕಾವೇರಿ ಆರತಿ ಕುರಿತಂತೆ ಪ್ರತಿಕ್ರಿಯಿಸಿ, “ಧಾರ್ಮಿಕ ಆಚರಣೆಗಳಿಗೆ ನನಗೆ ವಿರೋಧವಿಲ್ಲ. ಆದರೆ, ಸರ್ಕಾರ 100 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಆರತಿ ಮಾಡಲು ಮುಂದಾಗಿರುವುದು ಅತಿರೇಕವಾಗಿದೆ. ಈ ಹಣವನ್ನು ಮೂಲಭೂತ ವಿಕಾಸಕ್ಕೆ ಬಳಸಬಹುದು. ನಾವಿಲ್ಲಿಯವರೆಗೂ 100 ಕೋಟಿ ವೆಚ್ಚದ ಆರತಿಯೊಂದನ್ನು ಎಲ್ಲಿಯೂ ನೋಡಿಲ್ಲ. ಬಿಜೆಪಿ ಬೇಕಾದರೆ ಈ ಆರತಿಯನ್ನು ಉಚಿತವಾಗಿ ಕೂಡ ಮಾಡಿಕೊಡುತ್ತದೆ” ಎಂದು ಟೀಕಿಸಿದರು.














