ಮನೆ ರಾಷ್ಟ್ರೀಯ ಖಾವ್ಡಾ ಇಂಧನ ಯೋಜನೆ ಸಂಬಂಧ ಪ್ರತಿಪಕ್ಷಗಳ ಕೋಲಾಹಲ: ಮಧ್ಯಾಹ್ನ 2 ಗಂಟೆಗೆ ಲೋಕಸಭೆ ಕಲಾಪ ಮುಂದೂಡಿಕೆ

ಖಾವ್ಡಾ ಇಂಧನ ಯೋಜನೆ ಸಂಬಂಧ ಪ್ರತಿಪಕ್ಷಗಳ ಕೋಲಾಹಲ: ಮಧ್ಯಾಹ್ನ 2 ಗಂಟೆಗೆ ಲೋಕಸಭೆ ಕಲಾಪ ಮುಂದೂಡಿಕೆ

0

ನವದೆಹಲಿ: ಗುಜರಾತ್‌ ನಲ್ಲಿ ಉದ್ಯಮಿಯೊಬ್ಬರಿಗೆ ಯೋಜನೆಯೊಂದರ ಹಂಚಿಕೆ ಸಂಬಂಧ ವಿರೋಧ ಪಕ್ಷದ ಸದಸ್ಯರು ಇಂದು ಗುರುವಾರ ಲೋಕಸಭೆಯಲ್ಲಿ ತೀವ್ರ ಗದ್ದಲ, ಕೋಲಾಹಲ ಎಬ್ಬಿಸಿದ್ದರಿಂದ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.

Join Our Whatsapp Group

ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದ ಸದಸ್ಯರು ಯೋಜನೆಯ ಹಂಚಿಕೆಯ ವಿಷಯವನ್ನು ಎತ್ತಲು ಪ್ರಯತ್ನಿಸಿದರು. ಇದಕ್ಕೆ ಕೋಪಗೊಂಡಂತೆ ಕಂಡುಬಂದ ಸ್ಪೀಕರ್ ಓಂ ಬಿರ್ಲಾ ಪ್ರತಿಭಟನಾ ನಿರತ ಸದಸ್ಯರಿಗೆ ಕಲಾಪಕ್ಕೆ ಅಡ್ಡಿಪಡಿಸಬೇಡಿ, ಸದನದ ಸಂಪ್ರದಾಯವನ್ನು ಅನುಸರಿಸಿ ಎಂದು ಒತ್ತಾಯಿಸಿದರು.

ಕಲಾಪ ಸುಗಮವಾಗಿ ನಡೆಯುವುದನ್ನು ನೀವು ಬಯಸುವುದಿಲ್ಲವೇ ಎಂದು ಸಭಾಧ್ಯಕ್ಷರು ಕೇಳಿದರೂ ಪ್ರತಿಭಟನೆಗಳು ಮುಂದುವರಿದಂತೆ, ಮಧ್ಯಾಹ್ನ 2 ಗಂಟೆಯವರೆಗೆ ಕಲಾಪವನ್ನು ಮುಂದೂಡಲಾಯಿತು.

ಇಂದು ಪ್ರಶ್ನೋತ್ತರ ಅವಧಿಯಲ್ಲಿ ಒಂದು ಪ್ರಶ್ನೆಯನ್ನು ಎತ್ತಲಾಯಿತು. ಇಂಧನ ಉತ್ಪಾದನೆ ಪಾರ್ಕ್ ಸ್ಥಾಪಿಸಲು ಉದ್ಯಮ ಸಮೂಹವೊಂದಕ್ಕೆ ಗಡಿ ಭದ್ರತಾ ನಿಯಮಗಳನ್ನು ಸಡಿಲಿಸಲಾಗಿದೆ ಎಂಬ ವದಂತಿ ಕೇಳಿಬರುತ್ತಿದ್ದು, ಕೋಟ್ಯಾಧಿಪತಿಗಳಿಗೆ ಲಾಭ ಮಾಡಿಕೊಡಲು ಕೇಂದ್ರವು ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಕಾಂಗ್ರೆಸ್ ನಿನ್ನೆ ಆರೋಪಿಸಿತ್ತು.

ಗುಜರಾತ್‌ನಲ್ಲಿ ಅದಾನಿ ಗ್ರೂಪ್‌ನ ನವೀಕರಿಸಬಹುದಾದ ಇಂಧನ ಪಾರ್ಕ್ ನಿರ್ಮಾಣಕ್ಕೆ ಹಾದಿ ಸುಗಮಮಾಡಿಕೊಡಲು ಪಾಕಿಸ್ತಾನ ಗಡಿಯಲ್ಲಿ ರಾಷ್ಟ್ರೀಯ ಭದ್ರತಾ ಶಿಷ್ಟಾಚಾರಗಳನ್ನು ಸರ್ಕಾರ ಸಡಿಲಿಸಿದೆ ಎಂಬ ಮಾಧ್ಯಮ ವರದಿಗಳನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಹುಸಿ ರಾಷ್ಟ್ರೀಯತೆಯ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ ಎಂದು ಆರೋಪಿಸಿದ್ದರು.