ಮನೆ ಮನರಂಜನೆ ‘ಆರ್ಕೆಸ್ಟ್ರಾ ಮೈಸೂರು’ ಸಿನಿಮಾ ವಿಮರ್ಶೆ

‘ಆರ್ಕೆಸ್ಟ್ರಾ ಮೈಸೂರು’ ಸಿನಿಮಾ ವಿಮರ್ಶೆ

0

ಇಲ್ಲಿ ಯಾವುದು ಸುಲಭವಾಗಿ ದಕ್ಕುವುದಿಲ್ಲ, ಅದಕ್ಕೊಂದು ಹೋರಾಟದ ಅವಶ್ಯಕತೆ ಇರುತ್ತದೆ. ಈ ಹೋರಾಟದ ಪ್ರಯಾಣದಲ್ಲಿ ಸಾಕಷ್ಟು ಕಲ್ಲು ಮುಳ್ಳುಗಳಿರುತ್ತವೆ. ಅವುಗಳನ್ನೆಲ್ಲಾ ದಾಟಿಕೊಂಡು ಬಂದಾಗ ಸಿಗುವ ಸಕ್ಸಸ್’ಗೊಂದು ಬೆಲೆ, ತೂಕ ಇರುತ್ತದೆ. ಅಂತಹದ್ದೊಂದು ಹೋರಾಟದ ಕಥೆ ‘ಆರ್ಕೆಸ್ಟ್ರಾ ಮೈಸೂರು’ ಸಿನಿಮಾದಲ್ಲಿದೆ. ಪ್ರಪಂಚದ ಎಲ್ಲರ ಬದುಕನ್ನು ಬೆಳ್ಳಿತೆರೆಯ ಮೇಲೆ ನೋಡಿದ್ದಾಗಿದೆ. ಆರ್ಕೆಸ್ಟ್ರಾ ಹಾಡುಗಾರರ ಬದುಕು ಸಿನಿಮಾವಾಗಿದ್ದು ವಿರಳ. ಈ ಚಿತ್ರದಲ್ಲಿಅದಾಗಿದೆ ಎನ್ನಬಹುದು.

ಹಲವು ಕಡೆಗಳಲ್ಲಿಆರ್ಕೆಸ್ಟ್ರಾ ಮನರಂಜನೆಯ ಪ್ರಮುಖ ಕಾರ್ಯಕ್ರಮ. ಗಣೇಶ ಹಬ್ಬ, ಕನ್ನಡ ರಾಜ್ಯೋತ್ಸವಗಳು ಆರ್ಕೆಸ್ಟ್ರಾಗಳಿಲ್ಲದೇ ಮುಗಿಯುವುದೇ ಇಲ್ಲ. ಅಲ್ಲಿ ಹಾಡುವವರು ಹಲವರಿಗೆ ರಾಕ್ಸ್ಟಾರ್’ಗಳಾಗಿರುತ್ತಾರೆ. ಅವರ ಬದುಕು ಆರ್ಕೆಸ್ಟ್ರಾ ಲೈಟ್’ಗಳಂತೆ ರಂಗುರಂಗಾಗಿರುತ್ತದೆ ಎಂದುಕೊಂಡಿರುತ್ತಾರೆ. ಅಲ್ಲಿಯೂ ಸಮಸ್ಯೆ ಇರುತ್ತದೆ. ಒಬ್ಬ ಮುಖ್ಯ ಗಾಯಕನಾಗಬೇಕು ಎಂದರೆ ಅನೇಕ ತೊಡರುಗಳಿರುತ್ತವೆ. ಆ ತೊಡರುಗಳೇ ಆರ್ಕೆಸ್ಟ್ರಾ ಮೈಸೂರು.

ಇದು ಮೈಸೂರಿನ ಹಾಡುಗಾರನ ಕಥೆ

ಡೆಂಟಲ್ ಕ್ಲಿನಿಕ್’ನಲ್ಲಿ ಕೆಲಸ ಮಾಡುವ ಪೂರ್ಣಚಂದ್ರನಿಗೆ ಆರ್ಕೆಸ್ಟ್ರಾ ಸಿಂಗರ್ ಆಗುವ ಕನಸು. ಮೈಸೂರಿನ ಗಾಂಧಿನಗರ ಆರ್ಕೆಸ್ಟ್ರಾಗಳ ನಗರ ಎಂದರೆ ತಪ್ಪಾಗುವುದಿಲ್ಲ. ಈ ನಗರದಲ್ಲಿ ಹಲವಾರು ಆರ್ಕೆಸ್ಟ್ರಾ ಕಂಪನಿಗಳಿವೆ. ಅಲ್ಲಿಗೆ ಹೋಗಿ ಅವಕಾಶಕ್ಕಾಗಿ ಹುಡುಕಾಡುತ್ತಾನೆ. ಈ ಸಮಯದಲ್ಲಿ ಮೈಸೂರು ಸುತ್ತಮುತ್ತ ನವೀನ್ ರಾಜ್ (ದಿಲೀಪ್ ರಾಜ್) ಆರ್ಕೆಸ್ಟ್ರಾದಲ್ಲಿ ಸ್ಟಾರ್ ಸಿಂಗರ್ ಆಗಿರುತ್ತಾರೆ. ಅವರ ಜತೆ ಸೇರಿಕೊಳ್ಳುವ ಪೂರ್ಣಚಂದ್ರ ಮುಂದೆ ಗಾಯಕನಾಗುತ್ತಾನೋ ಇಲ್ಲವೋ ಎಂಬುದು ಈ ಸಿನಿಮಾದ ಒನ್ಲೈನ್. ಇಲ್ಲಿ ಕೆಲವೊಮ್ಮೆ ನವೀನ್ ರಾಜ್ ಜತೆಗೆ ಪೂರ್ಣಚಂದ್ರನಿಗೆ ಪರಿಸ್ಥಿತಿಯೂ ವಿಲನ್ ಆಗುತ್ತದೆ. ಆ ದೃಶ್ಯಗಳನ್ನು ನಿರ್ದೇಶಕ ಸುನೀಲ್ ಬಹಳ ಸೂಕ್ಷ್ಮ ಸಂವೇದೆನೆಯಿಂದ ಚಿತ್ರಿಸಿದ್ದಾರೆ.

ಹಾಡುಗಳನ್ನು ಬರೆದ ಡಾಲಿ ಧನಂಜಯ

ಇಡೀ ಮೈಸೂರು, ಮೈಸೂರಿನ ಪರಿಸರ ಈ ಚಿತ್ರದಲ್ಲಿ ಒಂದು ಪಾತ್ರವಾಗಿದೆ. ಈ ಚಿತ್ರದಲ್ಲಿ ನಟಿಸಿರುವ ಎಲ್ಲರೂ ಮೈಸೂರಿನ ರಂಗ ಕಲಾವಿದರು. ಹೀಗೆ ಹಲವು ವಿಚಾರಗಳಿಗೆ ಆರ್ಕೆಸ್ಟ್ರಾ ಮೈಸೂರು ಒಂದು ರೀತಿಯಲ್ಲಿ ವಿಶೇಷ ಪ್ರಯೋಗ ಎನ್ನಬಹುದು. ಸಿನಿಮಾದ ಹಾಡುಗಳನ್ನು ಜನರಿಗೆ ತಲುಪಿಸುವಲ್ಲಿ ಆರ್ಕೆಸ್ಟ್ರಾಗಳ ಪಾತ್ರ ದೊಡ್ಡದಿರುತ್ತದೆ. ಆದರೆ ಅದರ ಬಗ್ಗೆ ಸಾಕಷ್ಟು ಜನರಿಗೆ ಹೆಚ್ಚಾಗಿ ಅರಿವಿಲ್ಲ. ಆರ್ಕೆಸ್ಟ್ರಾದ ಆಳ ಅಗಲ ಕೂಡ ಈ ಸಿನಿಮಾದಲ್ಲಿ ಅನಾವರಣಗೊಂಡಿದೆ. ನಿರ್ದೇಶಕ ಸುನೀಲ್ ಮೈಸೂರು ಚಿತ್ರವನ್ನು ಭಾವನಾತ್ಮಕವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮತ್ತು ಹಾಡುಗಳಿಗೆ ಸಾಹಿತ್ಯ ಬರೆದಿರುವ ಧನಂಜಯ ಸಾಥ್ ನೀಡಿದ್ದಾರೆ.

ತೆರೆಮೇಲೆ ಹೊಳೆದ ಪೂರ್ಣಚಂದ್ರ

ಪೂರ್ಣಚಂದ್ರ ಮೈಸೂರು ಅವರಿಗೆ ನಾಯಕ ನಟನಾಗಿ ಇದು ಮೊದಲ ಪ್ರಯತ್ನ. ಪ್ರತಿ ದೃಶ್ಯದಲ್ಲಿಯೂ ಅವರು ತಮ್ಮನ್ನು ತಾವು ತೆರೆದುಕೊಂಡಿದ್ದಾರೆ. ಆರಂಭದಲ್ಲಿಅಷ್ಟೇನೂ ಸೀರಿಯಸ್ಸಾಗಿ ಕಾಣದ ಪೂರ್ಣಚಂದ್ರ, ಸಿನಿಮಾ ಮುಗಿಯುವ ಹೊತ್ತಿಗೆ ಈತ ಒಬ್ಬ ಪ್ರತಿಭಾವಂತ ಮತ್ತು ಪ್ರಬುದ್ಧ ನಟ ಎನಿಸುತ್ತಾರೆ. ನಾಯಕಿ ರಾಜಲಕ್ಷ್ಮೀ ಸಹ ತಮ್ಮ ಮುಗ್ಧವಾದ ನಟನೆಯಿಂದ ಗಮನ ಸೆಳೆಯುತ್ತಾರೆ. ದಿಲೀಪ್ ರಾಜ್ ಒಬ್ಬ ಅದ್ಭುತ ಕಲಾವಿದ. ಅವರ ಸಾಮರ್ಥ್ಯಕ್ಕೆ ಸರಿಯಾದ ಅವಕಾಶ ಸಿಗಲಿಲ್ಲವೆನೋ ಎಂದು ಈ ಸಿನಿಮಾ ನೋಡಿದಾಗ ಅನಿಸುತ್ತದೆ. ಮಹೇಶ್ ಎಂಬ ಅಪ್ಪಟ ದೇಸಿ ಕಲಾವಿದ ಈ ಚಿತ್ರದ ಮೂಲಕ ಪರಿಚಯವಾಗಿದ್ದಾರೆ. ಇಡೀ ಸಿನಿಮಾದಲ್ಲಿ ಹಾಸ್ಯದ ಟಾನಿಕ್ ಎಂದರೆ ಈ ವ್ಯಕ್ತಿಯ ನಟನೆ. ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಸಚ್ಚಿದಾನಂದ ಸಚ್ಚು, ರಾಜೇಶ್ ಬಸವಣ್ಣ, ರವಿ ರಂಗವಲ್ಲಿ, ಸುಬ್ಬು ಹುಣಸೂರು, ಮಹಾದೇವ್ ಪ್ರಸಾದ್ ಸೇರಿದಂತೆ ಪ್ರತಿಯೊಬ್ಬ ಕಲಾವಿದರು ಬೆಳ್ಳಿತೆರೆಗೆ ಹೊಸಬರಾದರೂ ಉತ್ತಮವಾಗಿ ನಟಿಸಿದ್ದಾರೆ.

ಮೋಡಿ ಮಾಡುವ ರಘು ದೀಕ್ಷಿತ್

ರಘು ದೀಕ್ಷಿತ್ ಸಿನಿಮಾದ ಮತ್ತೊಬ್ಬ ಹೀರೋ ಎನ್ನಬಹುದು. ಎಲ್ಲಾ ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ. ರಾಹುಲ್ ರಾಯ್ ಅವರ ಸಿನಿಮಾಟೋಗ್ರಫಿಯಲ್ಲಿ ಮೈಸೂರು ಚೆಂದವಾಗಿ ಕಾಣುತ್ತದೆ. ಯಾವುದೇ ಮುಜುಗರವಿಲ್ಲದೆ ಕುಟುಂಬ ಸಮೇತ ನೋಡುವಂತಹ ಸಿನಿಮಾ ಮತ್ತು ಸಾಧನೆ ಮಾಡಿದ ಕೆಳ ಮಧ್ಯಮವರ್ಗದ ಹುಡುಗರು ಕನೆಕ್ಟ್ ಮಾಡಿಕೊಳ್ಳುವಂತಹ ಸಿನಿಮಾಗಳ ಪಟ್ಟಿಗೆ ‘ಆರ್ಕೆಸ್ಟ್ರಾ ಮೈಸೂರು’ ಸೇರುತ್ತದೆ. ಈ ವಾರಾಂತ್ಯಕ್ಕೆ ಮತ್ತು ಸಂಕ್ರಾಂತಿಗೊಂದು ಒಳ್ಳೆಯ ಸಿನಿಮಾ ಇದಾಗಿದೆ.