ಬೆಂಗಳೂರು: ಪತಿಯಿಂದ ದೂರವಾಗಿರುವ ಪತ್ನಿಯು ನೆಲೆಸಲು ಪತಿ ಹಾಗೂ ಆತನ ಕುಟುಂಬದವರು ವಾಸಿಸುತ್ತಿರುವ ಮನೆಯಲ್ಲಿಯೇ ಪ್ರತ್ಯೇಕ ಕೊಠಡಿ ಒದಗಿಸಲು ವಿಚಾರಣಾ ಕೋರ್ಟ್ ನೀಡಿದ್ದ ಆದೇಶವನ್ನು ಹೈಕೋರ್ಟ್ ತಿದ್ದುಪಡಿ ಮಾಡಿದೆ. ಅಲ್ಲದೇ ಪತ್ನಿಗೆ ಪರ್ಯಾಯ ವಸತಿ ವ್ಯವಸ್ಥೆ ಮಾಡಿಕೊಳ್ಳಲು ಮಾಸಿಕ 5 ಸಾವಿರ ರೂ.ಪಾವತಿಸುವಂತೆ ಪತಿಗೆ ಆದೇಶಿಸಿದೆ.
ಬೀದರ್ ಜಿಲ್ಲೆಯ ಸುನಿಲ್ ಕುಮಾರ್, ಮೊದಲನೇ ಪತ್ನಿ ಹಾಗೂ ಕುಟುಂಬದವರು ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ಮಾಡಿದೆ.
ಪ್ರಕರಣದಲ್ಲಿ ಅರ್ಜಿದಾರ ತನ್ನ ಮೊದಲನೆ ಪತ್ನಿ ಹಾಗೂ ಕುಟುಂಬದಸದಸ್ಯರೊಂದಿಗೆ ಮನೆಯೊಂದರಲ್ಲಿ ನೆಲೆಸಿದ್ದಾರೆ. ಸುನಿಲ್, ಎಲಿಜಬೆತ್ ಎಂಬಾಕೆಯನ್ನು ಮದುವೆಯಾಗಿದ್ದು, ಸದ್ಯ ಆಕೆಯಿಂದ ದೂರವಾಗಿದ್ದಾರೆ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯಿದೆಯಡಿ ಎಲಿಜಬೆತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ, 6 ಸಾವಿರ ರೂ. ಜೀವನಾಂಶ ಪಾವತಿಸಲು ಪತಿಗೆ ಆದೇಶಿಸಿದೆ. ಅಲ್ಲದೇ ಪತ್ನಿ ಮತ್ತವರ ಕುಟುಂಬ ಸದಸ್ಯರು ನೆಲೆಸಿರುವ ಮನೆಯಲ್ಲಿಯೇ ವಾಸಿಸಲು ಎಲಿಜಬೆತ್ ಗೂ ಒಂದು ಕೊಠಡಿ ನೀಡುವಂತೆ ನಿರ್ದೇಶಿಸಿದೆ ಎಂದು ಆದೇಶಿಸಿದೆ.
ಆದರೆ ವಿಚಾರಣಾ ನ್ಯಾಯಾಲಯದಂತೆ ಎಲಿಜಬೆತ್ ಪತ್ನಿ ಮತ್ತವರ ಕುಟುಂಬ ಸದಸ್ಯರೊಂದಿಗೆ ಒಂದೇ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ವಾಸಿಸುವುದು ಪ್ರಾಯೋಗಿಕವಾಗಿ ಕಾರ್ಯಸಾಧುವಲ್ಲ. ಇದರಿಂದ ಕುಟುಂಬದ ಇತರ ಸದಸ್ಯರ ಜೊತೆಗೆ ಅಸಮಧಾನ ಏರ್ಪಟ್ಟು ಸಿವಿಲ್ ಮತ್ತು ಕ್ರಿಮಿನಲ್ ವ್ಯಾಜ್ಯಕ್ಕೆ ಕಾರಣವಾಗಬಹುದು ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ.
ಆಕೆ ಪ್ರತ್ಯೇಕ ಸ್ಥಳದಲ್ಲಿ ವಾಸ ಮಾಡುವುದು ಸೂಕ್ತ. ಅದಕ್ಕಾಗಿ ಪತಿಯು ಆಕೆಗೆ ಮಾಸಿಕ 5 ಸಾವಿರ ರೂ. ಪಾವತಿಸುವುದು ಸಮಂಜಸವಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.