ಮೈಸೂರು: ಕೆಆರ್ ಎಸ್ ನಿಂದ ತಮಿಳುನಾಡಿಗೆ 2.5 ಟಿಎಂಸಿ ನೀರು ಹರಿಸುವಂತೆ ಕಳೆದ ಸಭೆಯಲ್ಲಿ ಕಾವೇರಿ ನ್ಯಾಯಮಂಡಳಿ ಆದೇಶಿಸಿರುವುದನ್ನು ಕಾವೇರಿ ಕ್ರಿಯಾ ಸಮಿತಿ ಖಂಡಿಸಿದ್ದು, ಮೇ 25 ರಂದು ದೊಡ್ಡಗಡಿಯಾರದ ಮುಂಭಾಗ ಧರಣಿ ನಡೆಸಲಾಗುವುದು ಬಿಜೆಪಿ ಮುಖಂಡ ಎಸ್ ಜಯಪ್ರಕಾಶ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿರುವ ಅವರು, ಲೋಕಸಭಾ ಫಲಿತಾಂಶದ ನಂತರ ಕಾವೇರಿ ನ್ಯಾಯಮಂಡಳಿ ವಿರುದ್ಧ ಉಗ್ರ ಹೋರಾಟ ನಡೆಸಲು ತೀರ್ಮಾನಿಸಲಾಗುವುದು ಎಂದಿದ್ದಾರೆ.
ರಾಜ್ಯದ ರಾಜಕಾರಣಿಗಳಲ್ಲಿ ಕಾವೇರಿ ನೀರಿನ ವಿಚಾರದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನು ತಮಿಳುನಾಡು ಚೆನ್ನಾಗಿ ಬಳಸಿಕೊಳ್ಳುತ್ತಿದ್ದು, ಕಾವೇರಿ ನೀರನ್ನು ಸಂಪೂರ್ಣವಾಗಿ ಬಳಸಿಕೊಂಡು ನಮ್ಮ ರಾಜ್ಯದ ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.